ನವದೆಹಲಿ: ಕೈಗಾರಿಕೆ, ಸಾರ್ವಜನಿಕ, ಸಹಕಾರ ಮತ್ತು ಖಾಸಗಿ ವಲಯದ ಪಿಂಚಣಿದಾರರಿಗೆ ಕನಿಷ್ಠ ಮಾಸಿಕ ₹7,500 ಪಿಂಚಣಿ ಹೆಚ್ಚಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ, ಇಪಿಎಸ್–95 ರಾಷ್ಟ್ರೀಯ ಆಂದೋಲನ ಸಮಿತಿ (ಎನ್‌ಎಸಿ) ಮನವಿ ಮಾಡಿದೆ.
ನಿರ್ಮಲಾ ಅವರನ್ನು ಭೇಟಿ ಮಾಡಿದ ಸಮಿತಿಯ ಪ್ರತಿನಿಧಿಗಳು, ಈ ಕುರಿತು ಮಾತುಕತೆ ನಡೆಸಿದರು. ಪಿಂಚಣಿದಾರರ ಹಿತಕಾಯುವ ನಿಟ್ಟಿನಲ್ಲಿ ಸರ್ಕಾರ ಈ ಕುರಿತು ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ಸಚಿವೆ ಭರವಸೆ ನೀಡಿದ್ದಾರೆ ಎಂದು ಸಮಿತಿ ತಿಳಿಸಿದೆ.
‘ಪಿಂಚಣಿದಾರರಿಗೆ ಆರ್ಥಿಕ ಭದ್ರತೆ ಒದಗಿಸುವ ಬಗ್ಗೆ ಸೂಕ್ತ ಮಾರ್ಗೋಪಾಯವನ್ನು ರೂಪಿಸುವ ಬಗ್ಗೆ ನಿರ್ಮಲಾ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದೆ.
ಈ ಸಮಿತಿ ವ್ಯಾಪ್ತಿಯಲ್ಲಿ 78 ಲಕ್ಷ ಪಿಂಚಣಿದಾರರು ಹಾಗೂ ಕೈಗಾರಿಕಾ ವಲಯದಲ್ಲಿ ದುಡಿಯುತ್ತಿರುವ 7.5 ಕೋಟಿ ಕಾರ್ಮಿಕರು ಇದ್ದಾರೆ.
ಇತ್ತೀಚೆಗೆ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯಾ ಅವರನ್ನು ಭೇಟಿ ಮಾಡಿದ್ದ ಸಮಿತಿಯ ಪ್ರತಿನಿಧಿಗಳು, ಪಿಂಚಣಿ ಹೆಚ್ಚಿಸುವಂತೆ ಒತ್ತಾಯಿಸಿದ್ದರು.
ಪ್ರಸ್ತುತ ಪಿಂಚಣಿದಾರರಿಗೆ ಮಾಸಿಕ ₹1,450 ಪಿಂಚಣಿ ಲಭಿಸುತ್ತಿದೆ. ಇಪಿಎಸ್ ಸದಸ್ಯರು ಮತ್ತು ಅವರ ಪತ್ನಿಯರಿಗೆ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ನೀಡಬೇಕು ಎಂಬುದು ಸಮಿತಿಯ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.