ADVERTISEMENT

ಪೆಟ್ರೋಲ್, ಡೀಸೆಲ್ ತೆರಿಗೆ ಕಡಿತ ಘೋಷಿಸಿದ ರಾಜ್ಯಗಳು: ಎಲ್ಲಿ ಎಷ್ಟು ಇಳಿಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ನವೆಂಬರ್ 2021, 3:50 IST
Last Updated 4 ನವೆಂಬರ್ 2021, 3:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರವು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ ₹10, ಪೆಟ್ರೋಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ ₹5 ತಗ್ಗಿಸಿದೆ. ಕೇಂದ್ರದ ನಿರ್ಧಾರ ಪ್ರಕಟವಾದ ಬೆನ್ನಿಗೇ ರಾಜ್ಯ ಸರ್ಕಾರಗಳು ಸಹ ಗ್ರಾಹಕರ ಮೇಲೆ ತೈಲದ ತೆರಿಗೆ ಹೊಣೆಯನ್ನು ಕಡಿತಗೊಳಿಸಲು ತೀರ್ಮಾನಿಸಿವೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರಿಗೆ ಗರಿಷ್ಠ ₹7ರ ವರೆಗೂ ಕಡಿಮೆ ಮಾಡುತ್ತಿದ್ದು, ಇದರಿಂದಾಗಿ ಡೀಸೆಲ್‌ ದರ ₹17ರಷ್ಟು ಮತ್ತು ಪೆಟ್ರೋಲ್‌ ₹12ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.

ಯಾವ ರಾಜ್ಯದಲ್ಲಿ ಎಷ್ಟು ಇಳಿಕೆ?

ಕರ್ನಾಟಕ

ADVERTISEMENT

ಕರ್ನಾಟಕ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ತಲಾ ₹7ರಷ್ಟು ಇಳಿಕೆ ಮಾಡುವುದಾಗಿ ಪ್ರಕಟಿಸಿದೆ. ತೆರಿಗೆ ಕಡಿತ ಗುರುವಾರ ಸಂಜೆಯಿಂದಲೇ ಅನ್ವಯವಾಗಲಿದೆ. ಇದರಿಂದ ರಾಜ್ಯದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹ 95.50 ಮತ್ತು ಪ್ರತಿ ಲೀಟರ್‌ ಡೀಸೆಲ್‌ ದರ ₹ 81.50ಗೆ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಂದರೆ, ರಾಜ್ಯದಲ್ಲಿ ಪೆಟ್ರೋಲ್‌ 12 ರೂಪಾಯಿ ಮತ್ತು ಡೀಸೆಲ್‌ 17 ರೂಪಾಯಿ ಇಳಿಕೆಯಾಗಲಿದೆ.

ಉತ್ತರಾಖಂಡ

ಪೆಟ್ರೋಲ್‌ ಮೇಲಿನ ತೆರಿಗೆಯನ್ನು 2 ರೂಪಾಯಿ ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಹೇಳಿದ್ದಾರೆ. ಇದರಿಂದಾಗಿ ಪೆಟ್ರೋಲ್‌ ದರ ಲೀಟರ್‌ಗೆ ಒಟ್ಟು 7 ರೂಪಾಯಿ ಕಡಿಮೆಯಾಗಲಿದೆ.

ಅಸ್ಸಾಂ

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‌ಗೆ ತಲಾ ₹7 ಇಳಿಕೆ ಮಾಡಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಪೆಟ್ರೋಲ್‌ ದರದಲ್ಲಿ ಒಟ್ಟು 12 ರೂಪಾಯಿ ಮತ್ತು ಡೀಸೆಲ್‌ 17 ರೂಪಾಯಿ ಕಡಿಮೆಯಾಗಲಿದೆ.

ಗೋವಾ

ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಪೆಟ್ರೋಲ್‌, ಡೀಸೆಲ್‌ ಎರಡರ ಮೇಲಿನ ತೆರಿಗೆಯನ್ನು 7 ರೂಪಾಯಿ ಕಡಿಮೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಹಣದುಬ್ಬರ ತಪ್ಪಿಸಲು ಮತ್ತು ಸಾಮಾನ್ಯ ಜನರ ಮೇಲಿನ ಹೊರೆಯನ್ನು ಇಳಿಸಲು ಕೇಂದ್ರ ಪ್ರಕಟಿಸಿರುವ ನಿರ್ಧಾರದ ಕುರಿತು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ತ್ರಿಪುರಾ

ಪೆಟ್ರೋಲ್‌ ₹12 ಮತ್ತು ಡೀಸೆಲ್‌ ₹17ರಷ್ಟು ಕಡಿಮೆಯಾಗಲಿದೆ ಎಂದು ತ್ರಿಪುರಾ ಸರ್ಕಾರ ಪ್ರಕಟಿಸಿದೆ. ರಾಜ್ಯ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ತಲಾ ₹7 ಇಳಿಕೆ ಮಾಡಿದ್ದು, ಇವತ್ತಿನಿಂದಲೇ ಹೊಸ ದರ ಅನ್ವಯವಾಗಿದೆ.

ಉತ್ತರ ಪ್ರದೇಶ

ಉತ್ತರ ಪ್ರದೇಶ ಸರ್ಕಾರವು ಪೆಟ್ರೋಲ್‌ ಮೇಲಿನ ತೆರಿಗೆಯನ್ನು 7 ರೂಪಾಯಿ ಮತ್ತು ಡೀಸೆಲ್‌ ಮೇಲಿನ ತೆರಿಗೆ 2 ರೂಪಾಯಿ ಇಳಿಸಲು ನಿರ್ಧರಿಸಿದೆ. ಈ ಮೂಲಕ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರ ತಲಾ ₹12ರಷ್ಟು ಕಡಿತವಾಗಲಿದೆ.

ಗುಜರಾತ್‌

ಪೆಟ್ರೋಲ್‌ ಮತ್ತು ಡೀಸೆಲ್‌ ತೆರಿಗೆಯಲ್ಲಿ ಕೇಂದ್ರ ಘೋಷಿಸಿರುವ ಕಡಿತದ ಜೊತೆಗೆ ಗುಜರಾತ್‌ ಸರ್ಕಾರವು ಹೆಚ್ಚುವರಿಯಾಗಿ 7 ರೂಪಾಯಿ ತೆರಿಗೆ ಇಳಿಕೆ ಮಾಡುತ್ತಿರುವುದಾಗಿ ಪ್ರಕಟಿಸಿದೆ.

ಮಣಿಪುರ

ಕೇಂದ್ರದ ಘೋಷಣೆಯ ಬೆನ್ನಲ್ಲೇ ಮಣಿಪುರ ಸಹ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ತಕ್ಷಣದಿಂದಲೇ (ಬುಧವಾರ ರಾತ್ರಿ) ಅನ್ವಯವಾಗುವಂತೆ 7 ರೂಪಾಯಿ ಕಡಿತಗೊಳಿಸಿದೆ. ದೀಪಾವಳಿಯ ಸಂದರ್ಭದಲ್ಲಿ ಜನರಿಗೆ ಉಡುಗೊರೆಯ ರೀತಿಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆ ಕಡಿತಗೊಂಡಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್‌.ಬಿರೆನ್‌ ಸಿಂಗ್‌ ಟ್ವೀಟಿಸಿದ್ದಾರೆ.

ಸಿಕ್ಕಿಂ

ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಂಗ್‌ ಅವರು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ಲೀಟರ್‌ಗೆ 7 ರೂಪಾಯಿಯಷ್ಟು ಕಡಿಮೆ ಮಾಡುತ್ತಿರುವುದಾಗಿ ಪ್ರಕಟಿಸಿದ್ದಾರೆ. ಈ ಮೂಲಕ ಪ್ರತಿ ಲೀಟರ್‌ ಪೆಟ್ರೋಲ್‌ ₹12 ಮತ್ತು ಡೀಸೆಲ್‌ ₹17 ರೂಪಾಯಿ ಕಡಿಮೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.