ನವದೆಹಲಿ/ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸೋಮವಾರವೂ ಹೆಚ್ಚಳ ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 30 ಪೈಸೆ ಹೆಚ್ಚಳ ಆಗಿದೆ. ಡೀಸೆಲ್ ಬೆಲೆಯಲ್ಲಿ 26 ಪೈಸೆ ಹೆಚ್ಚಳ ಆಗಿದೆ.
ಸೋಮವಾರ ಪೆಟ್ರೋಲ್ ಬೆಲೆಯು ದೆಹಲಿಯಲ್ಲಿ ಪ್ರತಿ ಲೀಟರ್‌ಗೆ ₹ 83.71 ಆಗಿತ್ತು. ಡೀಸೆಲ್ ಬೆಲೆಯು ₹ 73.87 ಆಗಿತ್ತು. ಈ ಹೆಚ್ಚಳದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಸತತವಾಗಿ ಆರು ದಿನಗಳಿಂದ ಹೆಚ್ಚಾದಂತಾಗಿದೆ. ನವೆಂಬರ್ 20ರ ನಂತರ ಆಗಿರುವ 15ನೆಯ ಏರಿಕೆ ಇದು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಈಗ 2018ರ ಸೆಪ್ಟೆಂಬರ್ ನಂತರದ ಗರಿಷ್ಠ ಮಟ್ಟದಲ್ಲಿ ಇದೆ. ಕಳೆದ ಹದಿನೆಂಟು ದಿನಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆಯು ₹ 2.65ರಷ್ಟು ಹಾಗೂ ಡೀಸೆಲ್ ಬೆಲೆಯು ₹ 3.41ರಷ್ಟು ಏರಿಕೆ ಕಂಡಿವೆ.
ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 50 ಅಮೆರಿಕನ್ ಡಾಲರ್ ಸಮೀಪಕ್ಕೆ ಬರುತ್ತಿದೆ. ಕೋವಿಡ್–19 ಸಾಂಕ್ರಾಮಿಕಕ್ಕೆ ಲಸಿಕೆಯು ಶೀಘ್ರವೇ ಲಭ್ಯವಾಗುತ್ತದೆ, ಲಸಿಕೆ ಅಭಿವೃದ್ಧಿಪಡಿಸಿದ ನಂತರ ತೈಲೋತ್ಪನ್ನಗಳ ಬೇಡಿಕೆಯು ಹೆಚ್ಚಾಗುತ್ತದೆ ಎಂಬ ನಿರೀಕ್ಷೆಯ ಕಾರಣದಿಂದಾಗಿ ಕಚ್ಚಾ ತೈಲ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಳ ಕಾಣುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆಯು ₹ 90.34 ಆಗಿದೆ. ಡೀಸೆಲ್ ಬೆಲೆಯು ₹ 80.51 ಆಗಿದೆ.
ಬೆಂಗಳೂರಿನಲ್ಲಿ: ಡೀಸೆಲ್ ಬೆಲೆಯು ಬೆಂಗಳೂರಿನಲ್ಲಿ ಸೋಮವಾರ ₹ 78.31 (ಭಾನುವಾರದ ದರಕ್ಕೆ ಹೋಲಿಸಿದರೆ 28 ಪೈಸೆ ಹೆಚ್ಚಳ) ಇತ್ತು. ಪೆಟ್ರೋಲ್ ಬೆಲೆಯು ₹ 86.51 (ಭಾನುವಾರದ ದರಕ್ಕೆ ಹೋಲಿಸಿದರೆ 31 ಪೈಸೆ ಹೆಚ್ಚಳ) ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.