ADVERTISEMENT

ಇಂಧನ ಚಿಲ್ಲರೆ ವಹಿವಾಟು ಕಷ್ಟ ಎನ್ನುತ್ತಿವೆ ಖಾಸಗಿ ಕಂಪನಿಗಳು

ಪಿಟಿಐ
Published 23 ಮೇ 2022, 11:27 IST
Last Updated 23 ಮೇ 2022, 11:27 IST
   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಮಾಡದೆ ಇರುವ ಕಾರಣದಿಂದಾಗಿ, ಇಂಧನದ ಚಿಲ್ಲರೆ ವಹಿವಾಟು ಖಾಸಗಿ ವಲಯದ ಪಾಲಿಗೆ ನಷ್ಟ ಉಂಟುಮಾಡುತ್ತಿದೆ ಎಂದು ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ ಕಂಪನಿಯು ಕೇಂದ್ರ ಸರ್ಕಾರಕ್ಕೆ ಹೇಳಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳವಾಗಿದ್ದರೂ ಐಒಸಿ, ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 2021ರ ನವೆಂಬರ್‌ನಿಂದ 137 ದಿನಗಳವರೆಗೆ ಹೆಚ್ಚಿಸಿರಲಿಲ್ಲ. ಆಗ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಹತ್ತಿರವಾಗಿತ್ತು. ಈ ವರ್ಷದ ಮಾರ್ಚ್‌ನಿಂದ 47 ದಿನಗಳವರೆಗೆ ಬೆಲೆಯನ್ನು ಹೆಚ್ಚಿಸಲಿಲ್ಲ.

‘ರಿಲಯನ್ಸ್‌ ಬಿಪಿ ಮೊಬಿಲಿಟಿ (ಆರ್‌ಬಿಎಂಎಲ್) ಕಂಪನಿಯು ಇಂಧನ ಬೆಲೆ ನಿಗದಿ ವಿಚಾರವಾಗಿ ‍ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರ ಬರೆದಿದೆ’ ಎಂದು ಮೂಲಗಳು ತಿಳಿಸಿವೆ. ಆರ್‌ಬಿಎಂಎಲ್ ಕಂಪನಿಯು ಪ್ರತಿ ತಿಂಗಳು ₹ 700 ಕೋಟಿ ನಷ್ಟ ಅನುಭವಿಸುತ್ತಿದ್ದು, ಇದನ್ನು ತಗ್ಗಿಸಲು ತನ್ನ ವಹಿವಾಟು ಕಡಿಮೆ ಮಾಡುತ್ತಿದೆ. ರಷ್ಯಾದ ರೊಸ್ನೆಫ್ಟ್ ಕಂಪನಿಯ ಹೂಡಿಕೆ ಇರುವ ನಯಾರಾ ಎನರ್ಜಿ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರಿಗೆ ₹ 3ರಷ್ಟು ಜಾಸ್ತಿ ಮಾಡಿದೆ.

ADVERTISEMENT

ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಹಿಂದಿನ ವಾರ ತಗ್ಗಿಸಿದ ನಂತರ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಯು ಅದರ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿವೆ. ತಮ್ಮ ನಷ್ಟವನ್ನು ಕಡಿಮೆ ಮಾಡಿಕೊಳ್ಳಲು ಅವು ಎಕ್ಸೈಸ್ ಸುಂಕ ಇಳಿಕೆಯನ್ನು ಬಳಸಿಕೊಂಡಿಲ್ಲ.

ಮೇ 16ರ ಲೆಕ್ಕಾಚಾರದ ಪ್ರಕಾರ ತೈಲ ಮಾರಾಟ ಕಂಪನಿಗಳಿಗೆ ಪ್ರತಿ ಲೀಟರ್‌ ಪೆಟ್ರೋಲ್‌ ಮಾರಾಟದಿಂದ ₹ 13.08ರಷ್ಟು, ಡೀಸೆಲ್ ಮಾರಾಟದಿಂದ ₹ 24.09ರಷ್ಟು ನಷ್ಟ ಆಗುತ್ತಿತ್ತು.

ಸರ್ಕಾರಿ ಕಂಪನಿಗಳು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಹಾಗೂ ತಮ್ಮ ಇತರ ವಹಿವಾಟುಗಳಿಂದ ಸಿಗುವ ಲಾಭವನ್ನು ಪರಿಗಣಿಸಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ನಿರ್ಧಿರಿಸುತ್ತಿವೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೆಟ್ರೋಲಿಯಂ ಸಚಿವಾಲಯ ಹಾಗೂ ಆರ್‌ಬಿಎಂಎಲ್ ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.