ADVERTISEMENT

ಎನ್‌ಪಿಎಸ್‌ ಹೂಡಿಕೆ: ಹೊಸ ವ್ಯವಸ್ಥೆ ಜಾರಿ

ಪಿಟಿಐ
Published 21 ಜೂನ್ 2024, 15:16 IST
Last Updated 21 ಜೂನ್ 2024, 15:16 IST
ದೀಪಕ್‌ ಮೊಹಂತಿ
ದೀಪಕ್‌ ಮೊಹಂತಿ   

ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ನಿಧಿಯ ಹೂಡಿಕೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ ಸಂಬಂಧ ಹೊಸ ವ್ಯವಸ್ಥೆ ಜಾರಿ‌ಗೊಳಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಮುಂದಾಗಿದೆ.

ಆಗಸ್ಟ್‌ ಅಥವಾ ಸೆಪ್ಟೆಂಬರ್‌ನಿಂದ ಜಾರಿಗೆ ಬರಲಿರುವ ಈ ವ್ಯವಸ್ಥೆಯು ಖಾಸಗಿ ವಲಯದ ಉದ್ಯೋಗಿಗಳಿ‌ಗಷ್ಟೇ ಅನ್ವಯವಾಗಲಿದೆ. 

ವಯಸ್ಸಿನ ಆಧಾರದ ಮೇಲೆ ಸ್ವಯಂಚಾಲಿತ ವಿಧಾನದ ಮೂಲಕ ಈಕ್ವಿಟಿ ಮಾರುಕಟ್ಟೆಯಲ್ಲಿ ಶೇ 50ರಷ್ಟು ಹೂಡಿಕೆ ಮಾಡಲು ಚಂದಾದಾರರಿಗೆ ಈ ವ್ಯವಸ್ಥೆಯಡಿ ಅವಕಾಶ ದೊರೆಯಲಿದೆ. ಅಲ್ಲದೆ, ಇದೊಂದು ಹೆಚ್ಚುವರಿ ಆಯ್ಕೆಯಷ್ಟೇ ಆಗಿದೆ ಎಂದು ಪಿಎಫ್‌ಆರ್‌ಡಿಎ ಅಧ್ಯಕ್ಷ ಡಾ.ದೀಪಕ್‌ ಮೊಹಂತಿ ತಿಳಿಸಿದ್ದಾರೆ.

ADVERTISEMENT

ಪ್ರಸ್ತುತ ಎನ್‌ಪಿಎಸ್‌ ಅಡಿಯಲ್ಲಿ ಹೂಡಿಕೆದಾರರ ನಿಧಿ ನಿರ್ವಹಣೆಗೆ ಸ್ವಯಂಚಾಲಿತ ಹಾಗೂ ಸಕ್ರಿಯ ಎಂಬ ಎರಡು ಆಯ್ಕೆಗಳಿವೆ.   

ಸಕ್ರಿಯ ವಿಧಾನದಡಿ ಚಂದಾದಾರರೇ ಈಕ್ವಿಟಿ, ಕಾರ್ಪೊರೇಟ್‌ ಬಾಂಡ್‌ ಮತ್ತು ಸರ್ಕಾರಿ ಸಾಲಪತ್ರಗಳಲ್ಲಿ ಹೂಡಿಕೆ ಬಗ್ಗೆ ನಿರ್ಧಾರ ಕೈಗೊಳ್ಳಬಹುದಾಗಿದೆ.

ಸ್ವಯಂಚಾಲಿತ ವಿಧಾನದಡಿ (ಆಟೊ ಚಾಯ್ಸ್‌) ಅಗ್ರೆಸೀವ್‌ ಫಂಡ್‌ (ಈಕ್ವಿಟಿ ಹೂಡಿಕೆ ಶೇ 75ರಷ್ಟು), ಮಧ್ಯಮ ಫಂಡ್‌ (ಈಕ್ವಿಟಿ ಹೂಡಿಕೆ ಶೇ 50ರಷ್ಟು) ಮತ್ತು ಕನ್ಸರ್ವೇಟಿವ್‌ ಫಂಡ್‌ (ಈಕ್ವಿಟಿ ಹೂಡಿಕೆ ಶೇ 25ರಷ್ಟು) ಎಂಬ ಮೂರು ಆಯ್ಕೆಗಳಿವೆ. ಈ ವಿಧಾನದಡಿ ಹೂಡಿಕೆಯಾದ ಮೊತ್ತವನ್ನು ಚಂದಾದಾರರ ವಯೋಮಾನಕ್ಕೆ ಅನುಗುಣವಾಗಿ ಸಂಬಂಧಿತ ಎನ್‌ಪಿಎಸ್‌ ಪಾಲುದಾರ ಸಂಸ್ಥೆಗಳೇ ನಿರ್ವಹಣೆ ಮಾಡುತ್ತವೆ.

ಚಂದಾದಾರರು 35 ವರ್ಷ ದಾಟಿದ ಬಳಿಕ ಈ ಮೂರು ಆಯ್ಕೆಗಳಲ್ಲಿ ಈಕ್ವಿಟಿ ಮಾರುಕಟ್ಟೆಗೆ ನಿಧಿಯ ಹಂಚಿಕೆ ಪ್ರಮಾಣ ಕಡಿಮೆಯಾಗಲಿದೆ. ಸದ್ಯ ಈ ವಯಸ್ಸಿನ ಮಿತಿಯನ್ನು 45ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಮೊಹಾಂತಿ ತಿಳಿಸಿದ್ದಾರೆ.

ಚಂದಾದಾರರ ಸಂಖ್ಯೆ ಏರಿಕೆ:

2023–24ನೇ ಆರ್ಥಿಕ ವರ್ಷದಲ್ಲಿ ಖಾಸಗಿ ವಲಯದಿಂದ ಎನ್‌ಪಿಎಸ್‌ಗೆ ಹೊಸದಾಗಿ 9.47 ಲಕ್ಷ ಚಂದಾದಾರರು ಸೇರ್ಪಡೆಯಾಗಿದ್ದಾರೆ. ಪ್ರಾಧಿಕಾರದಿಂದ ನಿರ್ವಹಿಸುವ ಸಂಪತ್ತಿನ ಮೊತ್ತದಲ್ಲಿ (ಎಯುಎಂ) ಶೇ 30.5ರಷ್ಟು ಏರಿಕೆಯಾಗಿದೆ ಎಂದು ಮೊಹಂತಿ ತಿಳಿಸಿದ್ದಾರೆ. 

2023–24ರಲ್ಲಿ ಅಟಲ್‌ ಪಿಂಚಣಿ ಯೋಜನೆಯಡಿ ಹೊಸದಾಗಿ 1.24 ಕೋಟಿ ಚಂದಾದಾರರು ಸೇರ್ಪಡೆಯಾಗಿದ್ದಾರೆ. ಈ ಪೈಕಿ ಶೇ 52ರಷ್ಟು ಮಹಿಳೆಯರು ಇದ್ದಾರೆ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.