ಬೆಂಗಳೂರು: ಫೋನ್ ಪೇ ಮಾಲೀಕತ್ವದ ಕಾರ್ಮಸ್ ಆ್ಯಪ್ ಪಿನ್‌ಕೋಡ್, ತಾಜಾ ಹಣ್ಣುಗಳು ಮತ್ತು ತರಕಾರಿಗಳ ಅತಿದೊಡ್ಡ ರಫ್ತುದಾರರಾದ ಸಿಂಪ್ಲಿ ನಾಮ್‌ಧಾರಿಸ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.
ಈ ಪಾಲುದಾರಿಕೆಯು ಸಿಂಪ್ಲಿ ನಾಮ್‌ಧಾರಿಸ್‌ಗೆ ದೊಡ್ಡಮಟ್ಟದ ಆನ್‌ಲೈನ್ ಗ್ರಾಹಕರನ್ನು ತಲುಪಲು ಸಹಾಯ ಮಾಡಲಿದೆ. ಇದರ ಉತ್ಪನ್ನಗಳು ಈಗ ಪಿನ್‌ಕೋಡ್‌ನಲ್ಲಿಯೂ ದೊರೆಯಲಿವೆ. ಈ ಆ್ಯಪ್ ಮೂಲಕ ದಿನಸಿ ಸಾಮಗ್ರಿಗಳು, ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಎಫ್‌ಎಂಸಿಜಿ ಉತ್ಪನ್ನಗಳನ್ನು ಪೂರೈಸಲಾಗುತ್ತದೆ.
ಪಿನ್‌ಕೋಡ್ 20 ಲಕ್ಷ ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಇಲ್ಲಿಯವರೆಗೆ 15 ಲಕ್ಷಗಿಂತಲೂ ಹೆಚ್ಚು ಆರ್ಡರ್‌ಗಳನ್ನು ವಿತರಣೆ ಮಾಡಿದೆ. ವ್ಯಾಪಾರಿಗಳಿಗೆ ಪಿನ್‌ಕೋಡ್, ಉಚಿತ ಡೆಲಿವರಿ, ಸೀಸನಲ್ ಇನ್ಸೆಂಟಿವ್ ನೀಡುವ ಮೂಲಕ ಆರ್ಡರ್‌ಗಳನ್ನು ಪೂರೈಸುವಲ್ಲಿ ವಿಶ್ವಾಸಾರ್ಹತೆ ಹೊಂದಿದೆ ಎಂದು ಕಂಪನಿ ತಿಳಿಸಿದೆ.
ಪಿನ್‌ಕೋಡ್, ದಿನನಿತ್ಯದ ಕಾರ್ಯಾಚರಣೆಗಳಿಗಾಗಿ ಮೊಬೈಲ್ ಆ್ಯಪ್ ಮೂಲಕ ಎಲ್ಲ ರೀತಿಯ ಬೆಂಬಲ ಒದಗಿಸುತ್ತದೆ. ವ್ಯಾಪಾರಿಗಳು ತಮ್ಮ ಡಿಜಿಟಲ್ ಸ್ಟೋರ್‌ಗಳನ್ನು ತಮ್ಮದೇ ರೀತಿಯಲ್ಲಿ ನಡೆಸಬಹುದೆಂಬ ಖಚಿತತೆಯನ್ನೂ ನೀಡುತ್ತದೆ. ಗ್ರಾಹಕರು ಮನೆಗಳಿಂದಲೇ ಅನುಕೂಲಕ್ಕೆ ತಕ್ಕಂತೆ ತಮ್ಮ ಪ್ರದೇಶದಲ್ಲಿನ ಸ್ಟೋರ್‌ಗಳು ಮತ್ತು ಸೂಪರ್ ಮಾರ್ಕೆಟ್‌ಗಳಲ್ಲಿ ಶಾಪಿಂಗ್ ಮಾಡಲು ಅವಕಾಶ ನೀಡುತ್ತದೆ ಎಂದು ತಿಳಿಸಿದೆ.
‘ಪಿನ್‌ಕೋಡ್ ಇ-ಕಾಮರ್ಸ್‌ನ ಬೆಳವಣಿಗೆಯ ಜೊತೆಗೆ ಸ್ಥಳೀಯ ವ್ಯವಹಾರವನ್ನು ಅಭಿವೃದ್ಧಿಪಡಿಸಲು ಮತ್ತು ಅವುಗಳನ್ನು ಸಶಕ್ತಗೊಳಿಸಲು ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ವ್ಯಾಪಾರಿಗಳು ತಮ್ಮ ಸ್ಟೋರ್‌ಗಳನ್ನು ತಮ್ಮಿಷ್ಟದಂತೆ ಡಿಜಿಟಲೈಸ್ ಮಾಡಬಹುದು’ ಎಂದು ಪಿನ್‌ಕೋಡ್‌ನ ಸಿಇಒ ವಿವೇಕ್ ಲೋಚೆಬ್ ಹೇಳಿದ್ದಾರೆ.
‘ಪಿನ್‌ಕೋಡ್‌ನೊಂದಿಗಿನ ನಮ್ಮ ಪಾಲುದಾರಿಕೆಯು ಆನ್‌ಲೈನ್ ಮೂಲಕ ಹೆಚ್ಚಿನ ಗ್ರಾಹಕರನ್ನು ತಲುಪಲು ಸಾಧ್ಯವಾಗುತ್ತದೆ. ತಾಜಾ ಹಣ್ಣು ಮತ್ತು ತರಕಾರಿಗಳು, ಸ್ಟೇಪಲ್ಸ್, ಡೇರಿ, ಎಫ್‌ಎಂಸಿಜಿ ಒಳಗೊಂಡಂತೆ 5,000ಕ್ಕೂ ಹೆಚ್ಚು ಉತ್ಪನ್ನಗಳನ್ನು ಖರೀದಿ ಮಾಡಬಹುದಾಗಿದೆ’ ಎಂದು ಸಿಂಪ್ಲಿ ನಾಮ್‌ಧಾರಿಸ್ ಸಿಇಒ ಗುರುಮುಖ್ ಸಿಂಗ್ ರೂಪ್ರಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.