ADVERTISEMENT

ಅನಾನಸ್ ಬೆಲೆ ದಿಢೀರ್ ಕುಸಿತ

ಜಮೀನಿನಲ್ಲೇ ಕೊಳೆಯುತ್ತಿರುವ ಬೆಳೆ: ರೈತರಿಗೆ ಆರ್ಥಿಕ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 2 ಮೇ 2019, 19:45 IST
Last Updated 2 ಮೇ 2019, 19:45 IST
ಸೊರಬ ತಾಲ್ಲೂಕಿನಲ್ಲಿ ಕಟಾವಿಗೆ ಬಂದಿರುವ ಅನಾನಸ್ ಬೆಳೆ
ಸೊರಬ ತಾಲ್ಲೂಕಿನಲ್ಲಿ ಕಟಾವಿಗೆ ಬಂದಿರುವ ಅನಾನಸ್ ಬೆಳೆ   

ಸೊರಬ: ಸಾವಯವ ಕೃಷಿ ಪದ್ಧತಿ ಹಾಗೂ ಮಿಶ್ರಬೆಳೆ ಬೇಸಾಯದ ಮೂಲಕ ತಾಲ್ಲೂಕಿನಲ್ಲಿ ಪ್ರಗತಿ ಕಡೆಗೆ ಮುಖ ಮಾಡಿದ್ದ ರೈತರನ್ನು ಈಗ ಅನಾನಸ್ ಬೆಳೆಯ ದಿಢೀರ್‌ ಬೆಲೆ ಕುಸಿತವು ಆರ್ಥಿಕ ಸಂಕಷ್ಟಕ್ಕೆ ನೂಕಿದೆ.

ಕಟಾವಿಗೆ ಬಂದ ಲಕ್ಷಾಂತರ ರೂಪಾಯಿ ಮೌಲ್ಯದ ಅನಾನಸ್ ಬೆಳೆ ಹೊಲದಲ್ಲಿಯೇ ಹಣ್ಣಾಗಿ ಕೊಳೆಯುತ್ತಿದೆ. ಭತ್ತಕ್ಕೆ ಕನಿಷ್ಠ ಬೆಲೆ ದೊರೆಯದ ಕಾರಣ ವಾಣಿಜ್ಯ ಬೆಳೆ ಬೆಳೆಯಲು ಮುಂದಾದ ತಾಲ್ಲೂಕಿನ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುಂಠಿ, ಬಾಳೆ, ಅನಾನಸ್ ಬೆಳೆದಿದ್ದರು. ಆದರೆ, ಇದೀಗ ಅನಾನಸ್‌ ಬೆಳೆಗೂ ದರ ಕುಸಿತ ಸಮಸ್ಯೆ ಕಾಡುತ್ತಿದೆ.

ಅಧಿಕ ಬೆಲೆ ಸಿಕ್ಕರೆ ಇಳುವರಿ ಇರುವುದಿಲ್ಲ. ಉತ್ತಮ ಇಳುವರಿ ಇದ್ದಾಗ ಬೆಲೆ ಸಿಗುವುದಿಲ್ಲ ಎಂಬ ಸವಾಲಿನ ನಡುವೆಯೂ ಕೃಷಿ ಕಾಯಕ ಬಿಡದ ರೈತರು ಸ್ಥಿರ ಬೆಲೆ ಸಿಗದೆ ನಷ್ಟ ಅನುಭವಿಸುವಂತಾಗಿದೆ.

ADVERTISEMENT

ಎರಡು ತಿಂಗಳ ಹಿಂದೆ ಒಂದು ಕೆ.ಜಿ. ಅನಾನಸ್‍ಗೆ ₹ 16 ಬೆಲೆ ಸಿಗುತ್ತಿತ್ತು. ಈಗ ₹ 10ಕ್ಕೆ ಕುಸಿದಿದೆ. ಒಣಭೂಮಿ ಸಾಗುವಳಿ ಹಾಗೂ ಮಡಿ ಮಾಡಿ ಅನಾನಸ್ ಸಸಿ ನೆಡಲು ಹಾಗೂ ಗೊಬ್ಬರ–ಔಷಧ ಸಿಂಪಡಿಸಲು ರೈತರು ಅಪಾರ ಹಣ ಖರ್ಚು ಮಾಡಿದ್ದರು.

‘ಅನಾನಸ್ ಸಸಿಗೆ ದುಪ್ಪಟ್ಟು ದರ ನೀಡಿ ಸಮೃದ್ಧವಾಗಿ ಬೆಳೆ ಬೆಳೆದಿದ್ದೇವೆ. ಆದರೆ, ಒಳ್ಳೆಯ ಬೆಲೆ ಮಾತ್ರ ಸಿಗುತ್ತಿಲ್ಲ. ಅನಾನಸ್‍ ಕಟಾವು ಮಾಡಿ ಲಾರಿಗೆ ಲೋಡ್ ಮಾಡಿಸಲು ಕೂಲಿ ನೀಡಲು ಈ ಬೆಲೆ ಸಾಕಾಗುವುದಿಲ್ಲ. ಮತ್ತೊಂದು ಕಟಾವಿನಲ್ಲಾದರೂ ಲಾಭ ಪಡೆಯೋಣ ಎಂದರೆ ಮಳೆಗಾಲ ಹತ್ತಿರ ಬರುತ್ತಿದೆ. ಹಣ್ಣು ಖರೀದಿಸಲು ಹೊಲಕ್ಕೆ ವಾಹನಗಳೂ ಬರುತ್ತಿಲ್ಲ’ ಎಂದು ರೈತ ಸೋಮಪ್ಪ ಆತಂಕಪಟ್ಟರು.

‘ಅನಾನಸ್‌ಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇಲ್ಲ. ಜ್ಯೂಸ್ ಸೇರಿ ಹಣ್ಣಿನ ಖಾದ್ಯ ತಯಾರಿಸುವ ಸಣ್ಣ ಕಂಪನಿಗಳು ಮಾತ್ರ ಖರೀದಿಸುತ್ತವೆ. ದೆಹಲಿಯಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಅಲ್ಲಿಗೆ ಒಯ್ಯುವಾಗ ಹಣ್ಣಾಗುವ ಹದಿನೈದು ದಿನಗಳ ಮೊದಲೇ ಕೀಳಬೇಕು. ಬಿಸಿಲ ಶಾಖಕ್ಕೆ ವಾಹನದಲ್ಲಿಯೇ ಜಾಸ್ತಿ ಹಣ್ಣಾದರೆ ಇನ್ನೂ ಕಡಿಮೆ ದರ ಸಿಗುತ್ತದೆ. ಭಾಷೆಯ ಸಮಸ್ಯೆಯಿಂದಲೂ ದಲ್ಲಾಳಿಗಳು ಸಣ್ಣಪುಟ್ಟ ರೈತರಿಗೆ ಮೋಸ ಮಾಡುತ್ತಾರೆ’ ಎಂದು ಕೃಷಿಕ ನಾಗರಾಜಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನಲ್ಲಿ ಮೊದಲಿನಿಂದಲೂ ಮಳೆಯಾಶ್ರಿತ ಜಮೀನಿನಲ್ಲಿ ಭತ್ತ ಬೆಳೆಯುತ್ತಿದ್ದರು. ಇತ್ತೀಚೆಗೆ ಕೊಳವೆ ಬಾವಿ ಕೊರೆಸಿ ಅಡಿಕೆ, ಬಾಳೆ, ಶುಂಠಿ ಹಾಗೂ ಅನಾನಸ್ ಬೆಳೆದು ಆರ್ಥಿಕ ಸುಧಾರಣೆ ಕಂಡುಕೊಳ್ಳಲು ರೈತರು ಯತ್ನಿಸುತ್ತಿದ್ದಾರೆ. ಆದರೆ, ಯಾವ ಬೆಳೆಗೂ ಸ್ಥಿರ ಬೆಲೆ ಸಿಗುತ್ತಿಲ್ಲ. ಹಾಕಿದ ಬಂಡವಾಳವೂ ಕೈಗೆ ಸಿಗುತ್ತಿಲ್ಲ ಎಂಬುದು ರೈತರ ಅಳಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.