ನವದೆಹಲಿ: ಪೈರಸಿ ಹಾವಳಿಯಿಂದಾಗಿ 2023ರಲ್ಲಿ ಭಾರತೀಯ ಮನರಂಜನಾ ಉದ್ಯಮವು ₹22,400 ಕೋಟಿ ನಷ್ಟ ಅನುಭವಿಸಿದೆ ಎಂದು ಇವೈ– ಇಂಟರ್‌ನೆಟ್ ಆ್ಯಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (ಇವೈ– ಐಎಎಂಎಐ) ವರದಿ ತಿಳಿಸಿದೆ.
ದೇಶದಲ್ಲಿ ಪೈರಸಿ ಹಾವಳಿ ಮಿತಿಮೀರಿದೆ. ಇದರ ನಿಯಂತ್ರಣಕ್ಕೆ ಕಠಿಣ ನಿಯಮಾವಳಿಗಳನ್ನು ರೂಪಿಸುವ ಅಗತ್ಯವಿದೆ. ಇದರಿಂದ ಎದುರಾಗುವ ಅಪಾಯವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ವಲಯಗಳ ಸಹಭಾಗಿತ್ವದ ಅಗತ್ಯವಿದೆ ಎಂದು ಬುಧವಾರ ಬಿಡುಗಡೆಯಾಗಿರುವ ವರದಿ ಹೇಳಿದೆ.
ದೇಶದ ಮನರಂಜನಾ ವಲಯದ ಶೇ 51ರಷ್ಟು ಗ್ರಾಹಕರಿಗೆ ಪೈರಸಿ ಮಾಡುವವರಿಂದ ಸುಲಭವಾಗಿ ಕಂಟೆಂಟ್ ಲಭಿಸುತ್ತದೆ ಎಂದು ತಿಳಿಸಿದೆ.
ಚಿತ್ರಮಂದಿರಗಳ ಪೈರಸಿ ಕಂಟೆಂಟ್‌ನಿಂದ ₹13,700 ಕೋಟಿ ಹಾಗೂ ಒಟಿಟಿ ವೇದಿಕೆಗಳ ಕಂಟೆಂಟ್‌ನಿಂದ ₹8,700 ಕೋಟಿ ನಷ್ಟವಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹4,300 ಕೋಟಿ ಜಿಎಸ್‌ಟಿ ವರಮಾನ ನಷ್ಟವಾಗಿದೆ ಎಂದು ವಿವರಿಸಿದೆ.
ಅನಧಿಕೃತವಾಗಿ ಸಿನಿಮಾಗಳನ್ನು ನಕಲು ಮಾಡಿ ವಿತರಣೆ ಮಾಡುವುದು ಅಥವಾ ಸಂಗೀತ, ಸಿನಿಮಾ, ತಂತ್ರಾಂಶ ಸೇರಿ ಬೌದ್ಧಿಕ ಹಕ್ಕುಗಳನ್ನು ಉಲ್ಲಂಘಿಸುವುದು ಪೈರಸಿಯಾಗಲಿದೆ. ಇದು ಕಳ್ಳತನದ ಮತ್ತೊಂದು ರೂಪವಾಗಿದೆ. ಮೂಲ ಸೃಷ್ಟಿಕರ್ತರ ಹಕ್ಕುಗಳನ್ನು ಕಸಿಯುವುದರಿಂದ ಚಿತ್ರ ನಿರ್ಮಾಪಕರಿಗೆ ಭಾರಿ ಆರ್ಥಿಕ ನಷ್ಟವಾಗಲಿದೆ ಎಂದು ತಿಳಿಸಿದೆ.
‘ದೇಶದಲ್ಲಿ ಡಿಜಿಟಲ್ ಮನರಂಜನಾ ವಲಯವು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. 2026ರ ವೇಳೆಗೆ ಈ ವಲಯದ ಮಾರುಕಟ್ಟೆ ಮೌಲ್ಯವು ₹14,600 ಕೋಟಿ ಮುಟ್ಟಲಿದೆ. ಆದರೆ, ಪೈರಸಿ ಹಾವಳಿ ಅತಿರೇಕಕ್ಕೆ ಮುಟ್ಟಿದೆ. ಸರ್ಕಾರ, ಚಿತ್ರರಂಗದ ಪ್ರಮುಖರು ಮತ್ತು ಗ್ರಾಹಕರು ಒಟ್ಟಾಗಿ ಇದರ ವಿರುದ್ಧ ಸಮರ ಸಾರಬೇಕಿದೆ’ ಎಂದು ಐಎಎಂಎಐನ ಡಿಜಿಟಲ್ ಮನರಂಜನಾ ಸಮಿತಿ ಅಧ್ಯಕ್ಷ ರೋಹಿತ್ ಜೈನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.