ನವದೆಹಲಿ: ಅಮೆರಿಕದ ಕೋರ್ಟ್‌ನಲ್ಲಿ ದಾಖಲಾಗಿರುವ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಗೌತಮ್ ಅದಾನಿ ಹಾಗೂ ಇತರರ ವಿರುದ್ಧ ತನಿಖೆಗೆ ಆದೇಶಿಸುವಂತೆ ಕೋರಿ ವಕೀಲರೊಬ್ಬರು, ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ.
ವಕೀಲ ವಿಶಾಲ್ ತಿವಾರಿ ಅರ್ಜಿ ಸಲ್ಲಿಸಿದ್ದಾರೆ.
ಅದಾನಿ ಸಮೂಹದ ಷೇರುಗಳು ಕೃತಕ ಬೆಲೆಯಲ್ಲಿ ಮಾರಾಟವಾಗುತ್ತಿವೆ ಎಂದು ಅಮೆರಿಕದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡನ್‌ಬರ್ಗ್ ರಿಸರ್ಚ್, 2023ರ ಜನವರಿಯಲ್ಲಿ ಆರೋಪಿಸಿತ್ತು. ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಅದಾನಿ ಸಮೂಹ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ಕೈಗೊಂಡಿದೆ. ಒಟ್ಟು 24 ತನಿಖೆಗಳ ಪೈಕಿ 22 ತನಿಖೆಗಳು ಪೂರ್ಣಗೊಂಡಿವೆ. ಉಳಿದ ತನಿಖೆಗಳು ಪ್ರಗತಿಯಲ್ಲಿವೆ ಎಂದಷ್ಟೇ ವರದಿ ನೀಡಿದೆ ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.
ಪ್ರಸಕ್ತ ವರ್ಷದ ಜನವರಿ 3ರಂದು ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೆಬಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇದರ ಹೊರತಾಗಿಯೂ ನ್ಯಾಯಾಲಯಕ್ಕೆ ಅಂತಿಮ ತನಿಖಾ ವರದಿ ಸಲ್ಲಿಸಿಲ್ಲ. ಅಲ್ಲದೆ, ಅದಾನಿ ಸಮೂಹ ವಿರುದ್ಧದ ತನಿಖೆ ಬಗ್ಗೆ ಅಂತಿಮ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ. ಸದ್ಯದ ಸ್ಥಿತಿಯಲ್ಲಿ ತನಿಖಾ ವರದಿಯು ನ್ಯಾಯಾಲಯದಲ್ಲಿ ದಾಖಲಾಗದಿದ್ದರೆ ಸೆಬಿ ಮೇಲಿನ ವಿಶ್ವಾಸಾರ್ಹತೆ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.
ಸೌರ ವಿದ್ಯುತ್ ಯೋಜನೆಗಳ ಗುತ್ತಿಗೆ ಪಡೆಯಲು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಪ್ರಕರಣದ ಮೂಲಕ ಅದಾನಿ ಸಮೂಹವು ಹಲವು ದುಷ್ಕೃತ್ಯ ಎಸಗಿರುವುದು ಅನಾವರಣಗೊಂಡಿದೆ. ದೇಶದ ಹಿತದೃಷ್ಟಿಯಿಂದ ಭಾರತೀಯ ತನಿಖಾ ಏಜೆನ್ಸಿಗಳಿಂದ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಲಾಗಿದೆ.
‘ಸೆಬಿ ಕೈಗೊಂಡಿರುವ ತನಿಖೆಗಳನ್ನು ಮುಕ್ತಾಯಗೊಳಿಸಬೇಕು. ಜೊತೆಗೆ, ತನಿಖಾ ವರದಿ ಮತ್ತು ಅಂತಿಮ ನಿರ್ಣಯವನ್ನು ದಾಖಲೆ ರೂಪದಲ್ಲಿ ನ್ಯಾಯಾಲಯದ ಮುಂದೆ ಇರಿಸುವ ಮೂಲಕ ವಿಶ್ವಾಸ ಉಳಿಸಿಕೊಳ್ಳಬೇಕು. ಹೂಡಿಕೆದಾರರು ವಿಶ್ವಾಸ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು’ ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.
ನವೆಂಬರ್ 20ರಂದು ಅಮೆರಿಕದ ಅಟಾರ್ನಿ ಕಚೇರಿಯು ನ್ಯೂಯಾರ್ಕ್‌ನ ಪೂರ್ವ ಜಿಲ್ಲಾ ನ್ಯಾಯಾಲಯದಲ್ಲಿ ಗೌತಮ್ ಅದಾನಿ, ಸಾಗರ್ ಅದಾನಿ ಹಾಗೂ ಇತರೆ ಆರು ಮಂದಿ ವಿರುದ್ಧ ದಾಖಲಾಗಿರುವ ಆರೋಪ ಪಟ್ಟಿಯನ್ನು ಬಹಿರಂಗಪಡಿಸಿದೆ ಎಂದು ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.