ನವದೆಹಲಿ: ‘ಉತ್ಪಾದನೆ ಮತ್ತು ರಫ್ತು ವಹಿವಾಟು ಹೆಚ್ಚಿಸುವ ಉದ್ದೇಶದ ಉತ್ಪಾದನೆ ಆಧಾರಿತ ಪ್ರೋತ್ಸಾಹ (ಪಿಎಲ್‌ಐ) ಯೋಜನೆಯಿಂದಾಗಿ ಮುಂದಿನ ಐದು ವರ್ಷಗಳಲ್ಲಿ ದೇಶೀಯವಾಗಿ ಉತ್ಪಾದನೆ ಪ್ರಮಾಣವು ₹ 38 ಲಕ್ಷ ಕೋಟಿಯಷ್ಟು ಹೆಚ್ಚುವ ನಿರೀಕ್ಷೆಯಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನೀತಿ ಆಯೋಗ ಮತ್ತು ಕೈಗಾರಿಕಾ ಇಲಾಖೆ ಶುಕ್ರವಾರ ಪಿಎಲ್‌ಐ ಯೋಜನೆ ಕುರಿತು ಏರ್ಪಡಿಸಿದ್ದ ವೆಬಿನಾರ್ ಉದ್ದೇಶಿಸಿ ಮಾತನಾಡಿದ ಅವರು, ‘ದೇಶಿ ಉತ್ಪಾದನೆ ಹೆಚ್ಚಿಸಲು ಸರ್ಕಾರ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ’ ಎಂದರು.
‘ಬಜೆಟ್‌ನಲ್ಲಿ ಪಿಎಲ್‌ಐ ಯೋಜನೆಗಾಗಿ ₹ 2 ಲಕ್ಷ ಕೋಟಿಯನ್ನು ಮುಂದಿನ ಐದು ವರ್ಷಗಳ ಅವಧಿಗೆ ಸರ್ಕಾರ ನಿಗದಿಪಡಿಸಿದೆ. ಯೋಜನೆಯಿಂದಾಗಿ ಉತ್ಪಾದನೆ ಜೊತೆಗೆ ಯೋಜನೆಯ ಲಾಭ ಪಡೆಯುವ ಕೆಲಸಗಾರರ ಸಂಖ್ಯೆಯೂ ದುಪ್ಪಟ್ಟಾಗಲಿದ್ದು, ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂಬ ನಿರೀಕ್ಷೆ ಇದೆ’ ಎಂದು ಹೇಳಿದರು.
ಸುಗಮ ವಹಿವಾಟಿಗೆ ಅನುವಾಗುವಂತೆ ಉದ್ಯಮದ ಮೇಲಿನ ಒತ್ತಡವನ್ನು ತಗ್ಗಿಸಲು ಹಾಗೂ ಸಾರಿಗೆ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿಯೂ ಸರ್ಕಾರ ಕೆಲಸ ಮಾಡುತ್ತಿದೆ. ಸರಾಸರಿ ಉತ್ಪಾದನೆಯ ಶೇ 5ರಷ್ಟನ್ನು ಪ್ರೋತ್ಸಾಹಕವಾಗಿ ನೀಡಲಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.