ನವದೆಹಲಿ: ‘ಭಾರತದ ಸರಕು ಸಾಗಣೆ ವೆಚ್ಚವು ಜಗತ್ತಿನ ಇತರೆ ದೇಶಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಅದನ್ನು ಒಂದಂಕಿ ಮಟ್ಟಕ್ಕೆ ಇಳಿಕೆ ಮಾಡಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.
ಸರಕು ಸಾಗಣೆಯ ಸಂಬಂಧಿಸಿದ ರಾಷ್ಟ್ರೀಯ ನೀತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಶೇ 13–14ರಷ್ಟು ಇರುವ ಸಾಗಣೆ ವೆಚ್ಚವನ್ನು ಆದಷ್ಟು ಬೇಗ ಒಂದಂಕಿ ಮಟ್ಟಕ್ಕೆ ಇಳಿಕೆ ಮಾಡುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ನಮಗೆ ದಕ್ಷತೆಯ ಅಗತ್ಯ ಇದೆ’ ಎಂದರು.
ಭಾರತದಲ್ಲಿ ಸರಕು ಸಾಗಣೆ ವೆಚ್ಚ ಜಿಡಿಪಿಯ ಶೇ 16ರಷ್ಟು ಇದೆ. ಇದು ಚೀನಾ (ಶೇ 10), ಅಮೆರಿಕ ಮತ್ತು ಯುರೋಪ್ (ಶೇ 8)ಗಿಂತಲೂ ಗರಿಷ್ಠ ಮಟ್ಟದ್ದಾಗಿದೆ. ವಿಶ್ವಬ್ಯಾಂಕ್‌ನ ಈಚಿನ ಅಂಕಿ–ಅಂಶಗಳ ಪ್ರಕಾರ, ಸಾಗಣೆ ವೆಚ್ಚದಲ್ಲಿ ಭಾರತವು 44ನೇ ಸ್ಥಾನದಲ್ಲಿದೆ.
ರೈಲು, ರಸ್ತೆ ಮತ್ತು ಜಲಮಾರ್ಗಗಳನ್ನು ಒಟ್ಟುಗೂಡಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಗೋದಾಮುಗಳ ಅಭಿವೃದ್ಧಿ ಮತ್ತು ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಅಳವಡಿಸಿಕೊಳ್ಳಲೂ ನೆರವಾಗಲಿದೆ.
‘ನಾವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಆಗಿದ್ದೇವೆ. ರಫ್ತು ವಹಿವಾಟಿಗೆ ಸಂಬಂಧಿಸಿದಂತೆ ಭಾರತವು ಹೊಸ ಗುರಿ ನಿಗದಿಪಡಿಸುತ್ತಿದ್ದು, ಅದನ್ನು ಸಾಧಿಸಲಾಗುತ್ತಿದೆ. ಭಾರತವು ಜಾಗತಿಕ ತಯಾರಿಕಾ ಕೇಂದ್ರವಾಗಿ ಹೊರಹೊಮ್ಮುತ್ತಿದ್ದು, ಜಗತ್ತು ಇದನ್ನು ಗುರುತಿಸಿದೆ. ಈ ನೀತಿಯು ರಫ್ತು ಉದ್ದಿಮೆಗೆ ಹೊಸ ವೇಗ ನೀಡಲಿದೆ’ ಎಂದು ಮೋದಿ ಹೇಳಿದ್ದಾರೆ.
ಸರ್ಕಾರವು ಈಚೆಗಷ್ಟೇ ಡ್ರೋನ್ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ತಂದಿದೆ. ಇದರಿಂದಾಗಿ ಸರಕುಸಾಗಣೆ ವಲಯದಲ್ಲಿ ಹಲವು ಸಾಧ್ಯತೆಗಳು ತೆರೆದುಕೊಳ್ಳುವ ಸಾಧ್ಯತೆ ಇದೆ. ಸಾಗಣೆ ಸಮಯ ಕಡಿಮೆ ಮಾಡಲು ಮುಂಬರುವ ದಿನಗಳಲ್ಲಿ ಡ್ರೋನ್ ಬಳಸಬಹುದಾಗಿದೆ. ಉದಾಹರಣೆಗೆ ಸಮುದ್ರ ತೀರದಿಂದ ನಿರ್ದಿಷ್ಟ ಪ್ರದೇಶದಲ್ಲಿ ತಾಜಾ ಮೀನು ವಿತರಣೆಗೆ ಡ್ರೋನ್ ಬಳಸಬಹುದು ಎಂದು ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.