ADVERTISEMENT

‘ಜನಧನ್‌’ಗೆ ದಶಕ ಸಂಭ್ರಮ

ಒಟ್ಟು ಖಾತೆದಾರರ ಪೈಕಿ ಶೇ 55ರಷ್ಟು ಮಹಿಳೆಯರು

ಪಿಟಿಐ
Published 28 ಆಗಸ್ಟ್ 2024, 23:30 IST
Last Updated 28 ಆಗಸ್ಟ್ 2024, 23:30 IST
ಸಾಂಕೇತಿಕ ಇತ್ರ
ಸಾಂಕೇತಿಕ ಇತ್ರ   

ನವದೆಹಲಿ: ‘ಪ್ರಧಾನ ಮಂತ್ರಿ ಜನಧನ್‌ ಯೋಜನೆಯು ಇಡೀ ವಿಶ್ವದಲ್ಲಿಯೇ ಆರ್ಥಿಕ ಸೇರ್ಪಡೆಗೆ ಅತಿದೊಡ್ಡ ಮಾದರಿಯಾಗಿದೆ. ಬಡವರು ಆರ್ಥಿಕ ಮುಂಚೂಣಿ ಸ್ತರಕ್ಕೆ ಬರಲು ನೆರವಾಗಿದೆ. ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವಹಿಸಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರತಿಪಾದಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು 2014ರ ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯಂದು ಈ ಯೋಜನೆ ಪ್ರಕಟಿಸಿದ್ದರು. ಅದೇ ತಿಂಗಳ 28ರಂದು ಅಧಿಕೃತವಾಗಿ ಯೋಜನೆಗೆ ಚಾಲನೆ ಸಿಕ್ಕಿತ್ತು. ಈ ಯೋಜನೆ ಜಾರಿಯಾಗಿ ಬುಧವಾರಕ್ಕೆ ಹತ್ತು ವರ್ಷ ಸಂದಿವೆ.

ಇದರ ಅಂಗವಾಗಿ ನಿರ್ಮಲಾ ಸಂದೇಶ ನೀಡಿದ್ದು, ‘ಆರ್ಥಿಕ ಸೇರ್ಪಡೆ ಮತ್ತು ಸಬಲೀಕರಣಕ್ಕೆ ಔಪಚಾರಿಕ ಬ್ಯಾಂಕಿಂಗ್‌ ಸೇವೆಯ ಅಗತ್ಯವಿದೆ. ಇದು ಸಾರ್ವತ್ರಿಕವಾಗಿ ಹಾಗೂ ಕೈಗೆಟುಕುವಂತಿರಬೇಕು. ಜನಧನ್‌ನಿಂದ ಈ ಆಶಯ ಸಾಕಾರಗೊಂಡಿದೆ’ ಎಂದು ಹೇಳಿದ್ದಾರೆ.

ADVERTISEMENT

ಈ ಮೊದಲು ಬ್ಯಾಂಕ್‌ ಖಾತೆ, ಸಣ್ಣ ಉಳಿತಾಯ, ವಿಮೆ ಮತ್ತು ಸಾಲ ಸೌಲಭ್ಯ ಪಡೆಯಲು ಕಷ್ಟಕರವಾಗಿತ್ತು. ಜನಧನ್‌ ಯೋಜನೆಯು ಈ ಕೊರತೆ ನೀಗಿಸಿದೆ. ದೇಶದ ಬ್ಯಾಂಕಿಂಗ್ ಹಾಗೂ ಹಣಕಾಸು ಸೇವಾ ವ್ಯಾಪ್ತಿಯ ವಿಸ್ತರಣೆಗೆ ನೆರವಾಗಿದೆ ಎಂದು ತಿಳಿಸಿದ್ದಾರೆ.

ಜನಧನ್‌ ಖಾತೆ ತೆರೆಯಲು ಯಾವುದೇ ಶುಲ್ಕವಿಲ್ಲ. ಅಲ್ಲದೆ, ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳಬೇಕು ಎಂಬ ನಿಯಮವಿಲ್ಲ ಎಂದು ನಿರ್ಮಲಾ ತಿಳಿಸಿದ್ದಾರೆ.

ಶೇ 67ರಷ್ಟು ಖಾತೆಗಳನ್ನು ಗ್ರಾಮೀಣ ಅಥವಾ ಅರೆ ನಗರ ಪ್ರದೇಶದ ವ್ಯಾಪ್ತಿಯಲ್ಲಿ ತೆರೆಯಲಾಗಿದೆ. ಒಟ್ಟು ಖಾತೆದಾರರ ಪೈಕಿ ಶೇ 55ರಷ್ಟು ಮಹಿಳೆಯರಿದ್ದಾರೆ ಎಂದು ವಿವರಿಸಿದ್ದಾರೆ. 

ಜನಧನ್‌ ಖಾತೆಗೆ ಗ್ರಾಹಕರ ಮೊಬೈಲ್ ಮತ್ತು ಆಧಾರ್‌ ಸಂಖ್ಯೆ ಜೋಡಣೆ ಮಾಡಲಾಗಿದೆ. ಇದು ಆರ್ಥಿಕ ಸೇರ್ಪಡೆ ವ್ಯವಸ್ಥೆಗೆ ಪ್ರಮುಖ ಆಧಾರ ಸ್ತಂಭವಾಗಿದೆ. ಸರ್ಕಾರದ ಯೋಜನೆಗಳ ಸೌಲಭ್ಯವನ್ನು ಅರ್ಹ ಫಲಾನುಭಗಳಿಗೆ ತಲುಪಿಸಲು ಇದರಿಂದ ನೆರವಾಗಿದೆ ಎಂದು ಹೇಳಿದ್ದಾರೆ.

ನಿರ್ಮಲಾ ಸೀತಾರಾಮನ್‌ –ಪಿಟಿಐ ಚಿತ್ರ

53.13 ಕೋಟಿ– ಜನಧನ್‌ನಡಿ ತೆರೆದಿರುವ ಬ್ಯಾಂಕ್‌ ಖಾತೆಗಳು ₹2.30 ಲಕ್ಷ ಕೋಟಿ– ಖಾತೆಗಳಲ್ಲಿರುವ ಠೇವಣಿ ಮೊತ್ತ 36 ಕೋಟಿ– ಉಚಿತವಾಗಿ ರುಪೇ ಕಾರ್ಡ್ ವಿತರಣೆ ₹2 ಲಕ್ಷ– ಖಾತೆದಾರರಿಗೆ ವಿಮಾ ಸೌಲಭ್ಯ 3 ಕೋಟಿ– ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹೊಸದಾಗಿ ಖಾತೆ ತೆರೆಯುವ ಗುರಿ

ಆರ್ಥಿಕ ಸಬಲೀಕರಣ: ಪ್ರಧಾನಿ

ನವದೆಹಲಿ (ಪಿಟಿಐ): ‘ಜನಧನ್‌ ಯೋಜನೆಯು ಖಾತೆದಾರರಿಗೆ ಘನತೆ ತಂದುಕೊಟ್ಟಿದ್ದು ಸಬಲರಾಗಿಸಿದೆ. ಅಲ್ಲದೆ ದೇಶದ ಆರ್ಥಿಕತೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ‘ನಾವು 2014ರಲ್ಲಿ ಅಧಿಕಾರಕ್ಕೆ ಬಂದಾಗ ಪರಿಸ್ಥಿತಿ ಭಿನ್ನವಾಗಿತ್ತು. ಸ್ವಾತಂತ್ರ್ಯ ಲಭಿಸಿ 65 ವರ್ಷ ಕಳೆದಿದ್ದರೂ ಹಲವರಿಗೆ ಬ್ಯಾಂಕ್‌ ಸೇವೆ ಗಗನಕುಸುಮವೇ ಆಗಿತ್ತು’ ಎಂದು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ. ಉಳಿತಾಯದ ಹಣವನ್ನು ಮನೆಯಲ್ಲಿ ಇರಿಸಬೇಕಿತ್ತು. ಅದು ಕಳವಾಗುವ ಸಾಧ್ಯತೆ ಇತ್ತು. ಬಡವರ ಹೆಸರಿನಲ್ಲಿ ಆಗಿನ ಕಾಂಗ್ರೆಸ್‌ ಸರ್ಕಾರ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದ ಬಳಿಕವೂ ಈ ಸ್ಥಿತಿ ಇತ್ತು ಎಂಬುದು ವಿಪರ್ಯಾಸ. ಈಗ ಬ್ಯಾಂಕ್‌ ಖಾತೆಯ ಮೂಲಕ ಆರ್ಥಿಕ ಭದ್ರತೆಯೂ ಸಿಕ್ಕಿದ್ದು ಹಲವು ಕನಸುಗಳಿಗೆ ಜೀವ ಬಂದಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.