ನವದೆಹಲಿ: ಡಿಜಿಟಲ್ ವಂಚನೆ ತಡೆಯುವ ಉದ್ದೇಶದಿಂದ, ಸಿಮ್ ಕಾರ್ಡ್ ವಿತರಕರ ಪರಿಶೀಲನೆಯನ್ನು ಕಡ್ಡಾಯ ಮಾಡಲಾಗಿದೆ. ನಿಯಮ ಉಲ್ಲಂಘನೆ ಮಾಡುವವರಿಗೆ ₹10 ಲಕ್ಷ ದಂಡ ವಿಧಿಸಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ.
ಹೊಸ ನಿಯಮವು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ದೇಶದಲ್ಲಿ 10 ಲಕ್ಷ ವಿತರಕರಿದ್ದು, ಪರಿಶೀಲನೆಗೆ 6 ತಿಂಗಳ ಕಾಲಾವಕಾಶ ನೀಡಲಾಗುವುದು ಅವರು ತಿಳಿಸಿದ್ದಾರೆ.
ವಿತರಕರನ್ನು ನೇಮಿಸುವ ಮೊದಲು ದೂರಸಂಪರ್ಕ ಕಂಪನಿಗಳು ವಹಿವಾಟು ನಡೆಸುವವರಿಗೆ ಸಂಬಂಧಿಸಿದ ಮಾಹಿತಿ ಮತ್ತು ಅವರ ವಹಿವಾಟಿಗೆ ಸಂಬಂಧಿಸಿದ ಎಲ್ಲ ದಾಖಲೆಪತ್ರಗಳನ್ನು ಪಡೆದು ಪರಿಶೀಲನೆ ನಡೆಸಲಿವೆ. ಈ ಮೊದಲು ವಿತರಕರ ವಿವರವಾದ ದಾಖಲೆಪತ್ರಗಳನ್ನು ಪರಿಶೀಲಿಸುವ ಸಂಬಂಧ ನಿಯಮದಲ್ಲಿ ಸೂಚಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರವು 52 ಲಕ್ಷ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಿದೆ. 2023ರ ಮೇ ಬಳಿಕ 67 ಸಾವಿರ ವಿತರಕರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದ್ದು, 300 ಸಿಮ್ ಕಾರ್ಡ್ ವಿತರಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ವಂಚನೆಯ ಚಟುವಟಿಕೆಗಳಲ್ಲಿ ತೊಡಗಿದ್ದ 66 ಸಾವಿರ ಖಾತೆಗಳನ್ನು ವಾಟ್ಸ್ಆ್ಯಪ್ ಬ್ಲಾಕ್ ಮಾಡಿದೆ ಎಂದು ಸಚಿವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.