ADVERTISEMENT

ನಗದು ಹೆಚ್ಚಳ, ಡಿಜಿಟಲ್ ಪಾವತಿಯೂ ಜನಪ್ರಿಯ

ಪಿಟಿಐ
Published 7 ನವೆಂಬರ್ 2021, 14:42 IST
Last Updated 7 ನವೆಂಬರ್ 2021, 14:42 IST

ನವದೆಹಲಿ: ನೋಟು ರದ್ದತಿ ತೀರ್ಮಾನ ಕೈಗೊಂಡ ಐದು ವರ್ಷಗಳ ನಂತರದಲ್ಲಿ ದೇಶದಲ್ಲಿ ಚಲಾವಣೆಯಲ್ಲಿ ಇರುವ ನೋಟುಗಳ ಪ್ರಮಾಣವು ಹೆಚ್ಚುತ್ತ ಸಾಗಿದೆ. ಇದೇ ಸಂದರ್ಭದಲ್ಲಿ, ಡಿಜಿಟಲ್ ಪಾವತಿ ವ್ಯವಸ್ಥೆಗಳ ಮೂಲಕ ನಡೆಯುವ ವಹಿವಾಟುಗಳೂ ಬೆಳವಣಿಗೆ ದಾಖಲಿಸಿವೆ.

ಹಿಂದಿನ ಹಣಕಾಸು ವರ್ಷದಲ್ಲಿ ಚಲಾವಣೆಯಲ್ಲಿದ್ದ ಬ್ಯಾಂಕ್ ನೋಟುಗಳ ಪ್ರಮಾಣವು ಹೆಚ್ಚಳವಾಗಿದೆ. ಕೋವಿಡ್ ಸಾಂಕ್ರಾಮಿಕವು ಆರ್ಥಿಕ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮ ಬೀರಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುನ್ನೆಚ್ಚರಿಕೆಯ ಕ್ರಮವಾಗಿ ನಗದನ್ನು ಇರಿಸಿಕೊಳ್ಳಲು ಮುಂದಾಗಿದ್ದು ಇದಕ್ಕೆ ಕಾರಣ.

ಇದೇ ಅವಧಿಯಲ್ಲಿ ಡಿಜಿಟಲ್ ಪಾವತಿ ಪ್ರಮಾಣ ಕೂಡ ಹೆಚ್ಚಾಗುತ್ತಿರುವುದನ್ನು ಅಧಿಕೃತ ಅಂಕಿ–ಅಂಶಗಳು ಹೇಳುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು 2016ರ ನವೆಂಬರ್ 8ರಂದು, ಹಳೆಯ ₹ 1000 ಹಾಗೂ ₹ 500 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ ಘೋಷಣೆ ಮಾಡಿದರು. ಡಿಜಿಟಲ್ ಪಾವತಿ ಉತ್ತೇಜನ ಹಾಗೂ ಕಪ್ಪುಹಣದ ಚಲಾವಣೆ ತಗ್ಗಿಸುವುದು ಇದರ ಮುಖ್ಯ ಉದ್ದೇಶಗಳಲ್ಲಿ ಒಂದಾಗಿತ್ತು. ಡಿಜಿಟಲ್ ‍ಪಾವತಿ ವ್ಯವಸ್ಥೆ ದಿನೇ ದಿನೇ ಜನಪ್ರಿಯ ಆಗುತ್ತಿರುವ ಕಾರಣ, ನಗದಿನ ಬಳಕೆಯ ಹೆಚ್ಚಳವು ತುಸು ಮಟ್ಟಿಗೆ ವೇಗ ಕಳೆದುಕೊಂಡಿದೆ.

ADVERTISEMENT

2016ರ ನವೆಂಬರ್ 4ರಂದು ಚಲಾವಣೆಯಲ್ಲಿ ಇದ್ದ ನಗದಿನ ಮೌಲ್ಯವು ₹ 17.74 ಲಕ್ಷ ಕೋಟಿ ಇತ್ತು. ಇದು ಈ ವರ್ಷದ ಅಕ್ಟೋಬರ್ 29ರ ವೇಳೆಗೆ ₹ 29.17 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಂಕಿ–ಅಂಶಗಳು ಹೇಳುತ್ತವೆ. 2020–21ರಲ್ಲಿ ಚಲಾವಣೆಯಲ್ಲಿ ಇರುವ ನೋಟುಗಳ ಮೌಲ್ಯವು ಶೇಕಡ 16.8ರಷ್ಟು ಹೆಚ್ಚಳ ಆಗಿದೆ. 2019–20ರಲ್ಲಿ ಹೆಚ್ಚಳದ ಪ್ರಮಾಣವು ಶೇ 14.7ರಷ್ಟು ಆಗಿತ್ತು.

2016ರಲ್ಲಿ ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಸೌಲಭ್ಯಕ್ಕೆ ಚಾಲನೆ ನೀಡಲಾಯಿತು. ಈ ಡಿಜಿಟಲ್ ಪಾವತಿ ಸೌಲಭ್ಯ ಬಳಕೆಯು ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತ ಸಾಗಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಯುಪಿಐ ಮೂಲಕ ನಡೆದಿರುವ ವಹಿವಾಟಿನ ಮೊತ್ತವು ₹ 7.71 ಲಕ್ಷ ಕೋಟಿಗಿಂತ ಹೆಚ್ಚು ಆಗಿದೆ.

ಸಣ್ಣ ಮೊತ್ತದ ವಹಿವಾಟುಗಳಲ್ಲಿ ಜನ ಪಾವತಿಗೆ ಹೆಚ್ಚಾಗಿ ಯಾವುದನ್ನು ಅವಲಂಬಿಸಿದ್ದಾರೆ ಎಂಬುದನ್ನು ತಿಳಿಯಲು ಆರ್‌ಬಿಐ 2018ರ ಡಿಸೆಂಬರ್‌ನಿಂದ 2019ರ ಜನವರಿ ನಡುವೆ ಸಮೀಕ್ಷೆಯೊಂದನ್ನು ಆರು ನಗರಗಳಲ್ಲಿ ಕೈಗೊಂಡಿತ್ತು. ನಿತ್ಯದ ಖರ್ಚುಗಳನ್ನು ನಿಭಾಯಿಸುವಲ್ಲಿ ನಗದು ಬಳಕೆ ಹೆಚ್ಚಿದೆ ಎಂಬುದನ್ನು ಇದು ಕಂಡುಕೊಂಡಿದೆ. ₹ 500ರವರೆಗಿನ ವಹಿವಾಟುಗಳಿಗೆ ನಗದನ್ನು ಬಳಸುವುದಕ್ಕೆ ಜನ ಆದ್ಯತೆ ನೀಡುತ್ತಿದ್ದಾರೆ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.