ADVERTISEMENT

ಅಂಚೆ ಉಳಿತಾಯ ಯೋಜನೆಗೆ ಹೆಚ್ಚಿದ ಆಕರ್ಷಣೆ: ಬಡ್ಡಿ ದರ ಸತತ ಏರಿಕೆಯ ಪರಿಣಾಮ

ಬಡ್ಡಿ ದರ ಸತತ ಏರಿಕೆಯ ಪರಿಣಾಮ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2023, 0:00 IST
Last Updated 10 ಏಪ್ರಿಲ್ 2023, 0:00 IST
post
post   

ನವದೆಹಲಿ: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಕೇಂದ್ರ ಸರ್ಕಾರವು ಸತತ ಮೂರು ತ್ರೈಮಾಸಿಕಗಳಲ್ಲಿ ಹೆಚ್ಚು ಮಾಡಿರುವ ಪರಿಣಾಮವಾಗಿ, ಅಂಚೆ ಕಚೇರಿ ಅವಧಿ ಠೇವಣಿಗಳು ಮತ್ತೆ ಸ್ಪರ್ಧಾತ್ಮಕ
ವಾಗಿ ಕಾಣುತ್ತಿವೆ. ಈ ಉಳಿತಾಯ ಯೋಜನೆಗಳು ಬಡ್ಡಿ ದರ ಏರಿಕೆಗೂ ಮೊದಲು ಬ್ಯಾಂಕ್‌ ಎಫ್‌.ಡಿ.ಗಳಿಗಿಂತ ಕಡಿಮೆ ಲಾಭ ತಂದುಕೊಡುತ್ತಿದ್ದವು.

ಅಂಚೆ ಕಚೇರಿಯ ಎರಡು ವರ್ಷಗಳ ಅವಧಿ ಠೇವಣಿಗೆ ಈಗ ಶೇ 6.9ರಷ್ಟು ಬಡ್ಡಿ ಸಿಗುತ್ತಿದೆ. ಇದೇ ಅವಧಿಯ ಬಹುತೇಕ ಬ್ಯಾಂಕ್‌ ಎಫ್‌.ಡಿ.ಗಳು ಈಗ ಇಷ್ಟೇ ಪ್ರಮಾಣದ ಬಡ್ಡಿ ನೀಡುತ್ತಿವೆ.

ಆರ್‌ಬಿಐ ರೆಪೊ ದರವನ್ನು 2022ರ ಮೇ ತಿಂಗಳಿನಿಂದ ಹೆಚ್ಚಿಸುತ್ತಿದೆ. ಬ್ಯಾಂಕ್‌ಗಳು ತಮ್ಮಲ್ಲಿನ ಠೇವಣಿಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕಳೆದ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವ ಕೆಲಸಕ್ಕೆ ಚುರುಕು ನೀಡಿದವು.

ADVERTISEMENT

ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಅಕ್ಟೋಬರ್–ಡಿಸೆಂಬರ್ ತ್ರೈಮಾಸಿಕದಲ್ಲಿ ಗರಿಷ್ಠ ಶೇ 0.30ರವರೆಗೆ, ಜನವರಿ–
ಮಾರ್ಚ್‌ ತ್ರೈಮಾಸಿಕದಲ್ಲಿ ಗರಿಷ್ಠ ಶೇ 1.10ರವರೆಗೆ ಹಾಗೂ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಜೂನ್‌ ತ್ರೈಮಾಸಿಕಕ್ಕೆ ಗರಿಷ್ಠ ಶೇ 0.70ರವರೆಗೆ ಹೆಚ್ಚಿಸಿದೆ. ಇದಕ್ಕೂ ಮೊದಲು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವು ಸತತ ಒಂಬತ್ತು ತ್ರೈಮಾಸಿಕಗಳಲ್ಲಿ ಯಾವ ಬದಲಾವಣೆಯನ್ನೂ ಕಂಡಿರಲಿಲ್ಲ.

ಆರ್‌ಬಿಐ ಅಂದಾಜಿನ ಅನ್ವಯ 1 ವರ್ಷದಿಂದ 2 ವರ್ಷಗಳವರೆಗಿನ, ಬ್ಯಾಂಕ್‌ ರಿಟೇಲ್‌ ಠೇವಣಿಗಳ ಮೇಲಿನ ಸರಾಸರಿ ಬಡ್ಡಿ ದರವು ಈಗ ಶೇ 6.9ರಷ್ಟು ಇದೆ. ಇದು 2022ರ ಸೆಪ್ಟೆಂಬರ್‌ನಲ್ಲಿ ಶೇ 5.8ರಷ್ಟು ಇತ್ತು.

ಮೂರು ವರ್ಷಗಳ ಅವಧಿಯ ಅಂಚೆ ಕಚೇರಿ ಅವಧಿ ಠೇವಣಿಯ ಬಡ್ಡಿದರವು ಶೇ 7ಕ್ಕೆ ತಲುಪಿದೆ. ಇದು ಈ ಮೊದಲು ಶೇ 5.5ರಷ್ಟು ಇತ್ತು. ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ, ಎರಡು ವರ್ಷಕ್ಕಿಂತ ಹೆಚ್ಚಿನ ಹಾಗೂ ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗೆ ಶೇ 7ರಷ್ಟು ಬಡ್ಡಿ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.