ನವದೆಹಲಿ: 2023–24ನೇ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಪವರ್ ಗ್ರಿಡ್ ಕಾರ್ಪೊರೇಷನ್ ₹4,166 ಕೋಟಿ ನಿವ್ವಳ ಲಾಭ ಗಳಿಸಿದೆ.
2022–23ನೇ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ₹4,322 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಶೇ 4ರಷ್ಟು ಇಳಿಕೆಯಾಗಿದೆ. ವರಮಾನವು ₹12,557 ಕೋಟಿಯಿಂದ ₹12,305 ಕೋಟಿಗೆ ಕಡಿಮೆಯಾಗಿದೆ. ವರಮಾನದ ಇಳಿಕೆಯಿಂದಾಗಿ ಲಾಭವೂ ಇಳಿಕೆಯಾಗಿದೆ ಎಂದು ಕಂಪನಿಯು, ಷೇರುಪೇಟೆಗೆ ತಿಳಿಸಿದೆ.
2023–24ರ ಪೂರ್ಣ ಹಣಕಾಸು ವರ್ಷದಲ್ಲಿ ನಿವ್ವಳ ಲಾಭವು ₹15,573 ಕೋಟಿಗೆ ಏರಿಕೆಯಾಗಿದೆ. ಹಿಂದಿನ ಇದೇ ಅವಧಿಯಲ್ಲಿ ₹15,419 ಕೋಟಿ ಲಾಭ ಗಳಿಸಿತ್ತು. ವರಮಾನವು ₹46,605 ಕೋಟಿಯಿಂದ ₹46,913 ಕೋಟಿಗೆ ಏರಿಕೆಯಾಗಿದೆ.
ಷೇರಿನ ಮೌಲ್ಯ ಇಳಿಕೆ:
ಮಾರ್ಚ್ ತ್ರೈಮಾಸಿಕದ ಲಾಭದಲ್ಲಿ ಇಳಿಕೆ ಆಗಿರುವುದರಿಂದ ಪವರ್ ಗ್ರಿಡ್ ಕಾರ್ಪೊರೇಷನ್‌ನ ಷೇರಿನ ಮೌಲ್ಯವು ಗುರುವಾರ ಶೇ 2ರಷ್ಟು ಇಳಿದಿದೆ. ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಪ್ರತಿ ಷೇರಿನ ಬೆಲೆ ಕ್ರಮವಾಗಿ ₹319.75 ಮತ್ತು ₹319 ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.