ADVERTISEMENT

ಪ್ರಶ್ನೋತ್ತರ ಅಂಕಣ| ‘ನ್ಯೂ ಜೀವನ್‌ ಶಾಂತಿ’ ಪಾಲಿಸಿಯ ವೈಶಿಷ್ಟ್ಯವೇನು?

ಯು.ಪಿ.ಪುರಾಣಿಕ್
Published 21 ಜುಲೈ 2021, 12:49 IST
Last Updated 21 ಜುಲೈ 2021, 12:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ರಾಜಶೇಖರ್, ಮೈಸೂರು

l ಪ್ರಶ್ನೆ: ಎಲ್‌ಐಸಿ ಈಚೆಗೆ ಬಿಡುಗಡೆ ಮಾಡಿದ ‘ನ್ಯೂ ಜೀವನ್‌ ಶಾಂತಿ’ ಪಾಲಿಸಿಯ ವೈಶಿಷ್ಟ್ಯವೇನು? ಇದನ್ನು ಯಾರು ಮಾಡಿಸಬಹುದು? ಎಲ್‌ಐಸಿಯ ಅಧಿಕಾರಿಗಳನ್ನು ಸಂರ್ಪಕಿಸಲು ಅವರ ದೂರವಾಣಿ ಸಂಖ್ಯೆ ತಿಳಿಸಿ.

ಯು.ಪಿ ಪುರಾಣಿಕ್‌

ಉತ್ತರ: ‘ನ್ಯೂ ಜೀವನ್ ಶಾಂತಿ’ ಯೋಜನೆಯು ಎಲ್‌ಐಸಿಯ, ಪಿಂಚಣಿ ಪಡೆಯುವ ಯೋಜನೆ ಆಗಿದೆ. 30 ವರ್ಷದಿಂದ 79 ವರ್ಷದವರೆಗಿನವರು ಒಂಟಿಯಾಗಿ, ಜಂಟಿಯಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಕನಿಷ್ಠ ಹೂಡಿಕೆ
₹ 1.50 ಲಕ್ಷ. ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ. ಹೂಡಿಕೆ ಮಾಡಿದ ಒಂದು ವರ್ಷದ ನಂತರ ಪಿಂಚಣಿ
ಪಡೆಯಬಹುದಾಗಿದೆ ಹಾಗೂ ಒಂದು ವರ್ಷದ ಅವಧಿಗೆ ಹೂಡಿಕೆಯ ಶೇ 105ರಷ್ಟು ಜೀವ ವಿಮೆ ರಕ್ಷಣೆ ಕೂಡಾ ಇರುತ್ತದೆ. ಇದೊಂದು ಜೀವಾವಧಿ ಹೂಡಿಕೆ ಹಾಗೂ ಜೀವನಪರ್ಯಂತ ಪ್ರತಿ ತಿಂಗಳೂ ಪಿಂಚಣಿ ಪಡೆಯಬಹುದಾಗಿದೆ. ಪಾಲಿಸಿದಾರ ಮರಣ ಹೊಂದಿದಾಗ, ನಾಮ ನಿರ್ದೇಶನ ಹೊಂದಿದ ವ್ಯಕ್ತಿ ಸಂಪೂರ್ಣ ಹಣ ಪಡೆಯಬಹುದು. ಜಂಟಿ ಪಾಲಿಸಿಯಾದಲ್ಲಿ ಉಳಿದ ವ್ಯಕ್ತಿ ಅವರ ಜೀವಿತಕಾಲದ ತನಕವೂ ಪಿಂಚಣಿ ರೂಪದಲ್ಲಿ ಹಣ ಪಡೆಯಬಹುದು. ಹೂಡಿಕೆದಾರರು ಪಾಲಿಸಿ ಮಾಡಿಸಿದ ವರ್ಷ ಗರಿಷ್ಠ ₹ 1.50 ಲಕ್ಷ ಸೆಕ್ಷನ್‌ 80ಸಿ ಆಧಾರದ ಮೇಲೆ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಸಮೀಪದ ಎಲ್‌ಐಸಿ ಕಚೇರಿಗೆ ಭೇಟಿ ಕೊಡಿ.

ADVERTISEMENT

ಚಂದ್ರಮತಿ, ಉಡುಪಿ

l ಪ್ರಶ್ನೆ: ನನ್ನ ಮಗ ಹಾಗೂ ಮಗಳು ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ. ಇಬ್ಬರೂ ಅವಿವಾಹಿತರು. ಮಗನಿಗೆ ವಾರ್ಷಿಕ ₹ 11.50 ಲಕ್ಷ, ಮಗಳಿಗೆ ವಾರ್ಷಿಕ ₹ 10.80 ಲಕ್ಷ ಸಂಬಳ ಇದೆ. ಮಗನ ವಯಸ್ಸು 28 ವರ್ಷ, ಮಗಳ ವಯಸ್ಸು 26 ವರ್ಷ. ನಿಮ್ಮ ಅಂಕಣ ನೋಡಿ, ಪ್ರತೀ ವರ್ಷ ಆರ್‌.ಡಿ. ಮಾಡುತ್ತಾ ಬಂದು ಮಕ್ಕಳನ್ನು ಓದಿಸಿದ್ದೇನೆ ಹಾಗೂ ಪ್ರತಿ ವರ್ಷ 10 ಗ್ರಾಂ ಬಂಗಾರ ಕೊಳ್ಳುತ್ತಾ ಬಂದೆ. ಮಕ್ಕಳು ಉತ್ತಮ ಉಳಿತಾಯ ಮಾಡಲು, ತೆರಿಗೆ ಉಳಿಸಲು ಸಲಹೆ ನೀಡಿ. ಈ ವಿಚಾರದಲ್ಲಿ ಅವರಿಗೆ ಏನೂ ಅನುಭವ ಇಲ್ಲ. ಸಾಲಮಾಡಿ ಮನೆ ಕಟ್ಟಿಸಬೇಕೆಂದಿದ್ದಾರೆ.

ಉತ್ತರ: ಆರ್‌.ಡಿ. ಒಂದು ಕ್ರಮಬದ್ಧವಾದ ಉಳಿತಾಯ. ನೀವು ಇಂತಹ ಉಳಿತಾಯ ಮಾಡಿ ಮಕ್ಕಳನ್ನು ಓದಿಸಿರುವುದು ನನಗೆ ತುಂಬಾ ಖುಷಿ ತಂದಿದೆ. ನಿಮಗೆ ಸಾಧ್ಯವಾದರೆ ಬಂಗಾರದ ನಾಣ್ಯ ಕೊಳ್ಳುವ ಪ್ರಕ್ರಿಯೆಯನ್ನು ಮಕ್ಕಳ ಮದುವೆಯ ತನಕ ಮುಂದುವರಿಸಿ. ಮಕ್ಕಳು ಗೃಹಸಾಲ ಪಡೆದು ಮನೆ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಲಿ. ಇದೊಂದು ಉತ್ತಮ ಹೂಡಿಕೆ. ಸೆಕ್ಷನ್‌ 80ಸಿ ಹಾಗೂ 24 (ಬಿ) ಆಧಾರದ ಮೇಲೆ ಕಂತು ಬಡ್ಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು. ಸದ್ಯ ಅವರು ಕೊಡುವ ಮನೆಬಾಡಿಗೆ, ಗೃಹ ಸಾಲದಿಂದ ಉಳಿಸಬಹುದಾದ ತೆರಿಗೆ ಇವೆರಡರಿಂದಲೇ ಸಾಲದ ಬಹುಪಾಲು ಇಎಂಐ ತುಂಬಬಹುದು. ನೀವು ಹೇಗೆ ಆರ್‌.ಡಿ. ಮಾಡಿ ಮಕ್ಕಳನ್ನು ಓದಿಸಿದ್ದೀರೋ ಅದೇ ದಾರಿಯನ್ನು ಮಕ್ಕಳೂ ಅನುಸರಿಸಲಿ. ನಿಮ್ಮ ಇಬ್ಬರೂ ಮಕ್ಕಳು ಕನಿಷ್ಠ ₹ 50 ಸಾವಿರ ವಾರ್ಷಿಕ ಎನ್‌ಪಿಎಸ್‌ ಮಾಡಿ, ಪ್ರತ್ಯೇಕವಾಗಿ ತೆರಿಗೆ ವಿನಾಯಿತಿ ಪಡೆಯಲು ತಿಳಿಸಿ (ಸೆಕ್ಷನ್‌ 80ಸಿಸಿಡಿ–1ಬಿ). ನಿಮ್ಮ ಕುಟುಂಬಕ್ಕೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

ಸೋಮಶೇಖರ್, ರಾಯಚೂರು

l ಪ್ರಶ್ನೆ: ನನ್ನ ವಯಸ್ಸು 65 ವರ್ಷ. ನಿವೃತ್ತ ಸರ್ಕಾರಿ ನೌಕರ. ತಿಂಗಳ ಪಿಂಚಣಿ ₹ 48 ಸಾವಿರ. ವಾರ್ಷಿಕ ಬಡ್ಡಿ ವಮಾನ ₹ 2,87,975. ಸ್ವಂತ ಮನೆ ಇದೆ. ಎರಡು ಮನೆಗಳ ಬಾಡಿಗೆಯಿಂದ ತಿಂಗಳಿಗೆ ₹ 40 ಸಾವಿರ ಬರುತ್ತದೆ. ತೆರಿಗೆ ಹಾಗೂ ರಿಟರ್ನ್ಸ್‌ ತುಂಬುವ ವಿಚಾರದಲ್ಲಿ ಸಲಹೆ ನೀಡಿ.

ಉತ್ತರ: ನಿಮ್ಮ ವಾರ್ಷಿಕ ಪಿಂಚಣಿ ವರಮಾನ ₹ 5.76 ಲಕ್ಷ. ಬಡ್ಡಿ ಆದಾಯ ₹ 2,82,975. ಇವೆರಡರಿಂದ ನಿಮ್ಮ ವರಮಾನ ₹ 8,58,975 ಆಗುತ್ತದೆ. ಇದರಲ್ಲಿ ಸೆಕ್ಷನ್‌ 80ಟಿಟಿಬಿ ಅಡಿ ಬಡ್ಡಿಯಲ್ಲಿ ₹ 50 ಸಾವಿರ ಹಾಗೂ ಸೆಕ್ಷನ್‌ 16 (1ಎ)–ಸ್ಟ್ಯಾಂಡರ್ಡ್‌ ಡಿಡಕ್ಷನ್‌ ₹ 50 ಸಾವಿರ ಕಳೆದಾಗ ನಿಮ್ಮ ವರಮಾನ ₹ 7,58,975 ಆಗುತ್ತದೆ. ಇದೇ ವೇಳೆ ನಿಮಗೆ ₹ 40 ಸಾವಿರ ಬಾಡಿಗೆ ಬರುವುದರಿಂದ ಸೆಕ್ಷನ್‌ 24 (ಎ) ಆಧಾರದ ಮೇಲೆ ಶೇ 30ರಷ್ಟು ಇದರಲ್ಲಿ ಕಳೆದಾಗ ನಿಮ್ಮ ಬಾಡಿಗೆ ವರಮಾನ ವಾರ್ಷಿಕ ₹ 2,36,000 ಆಗುತ್ತದೆ. ಪಿಂಚಣಿ ಬಡ್ಡಿ, ಬಾಡಿಗೆ, ಇವುಗಳಿಂದ ಬರುವ ವರಮಾನದಲ್ಲಿ ಇಲ್ಲಿ ತಿಳಿಸಿದಂತೆ ವಿನಾಯಿತಿ ಪಡೆದ ನಂತರ ನಿಮ್ಮ ವಾರ್ಷಿಕ ಆದಾಯ ₹ 9,94,975 ಆಗುತ್ತದೆ. ನೀವು ₹ 3 ಲಕ್ಷಗಳ ತನಕ ತೆರಿಗೆ ವಿನಾಯಿತಿ ಪಡೆದು ನಂತರದ ಆದಾಯಕ್ಕೆ ತೆರಿಗೆ ಕೊಡಬೇಕಾಗುತ್ತದೆ. ಸ್ವಲ್ಪ ತೆರಿಗೆ ಉಳಿಸಲು ವಾರ್ಷಿಕ ₹ 1.50 ಲಕ್ಷವನ್ನು 5 ವರ್ಷಗಳ ಠೇವಣಿ ಮಾಡಿ. ಹಾಗೂ ಗರಿಷ್ಠ ₹ 50 ಸಾವಿರಕ್ಕೆ ಆರೋಗ್ಯ ವಿಮೆ ಮಾಡಿಸಿ. ಈ ಬಾರಿ ನೀವು ಸೆಪ್ಟೆಂಬರ್‌ 30ರೊಳಗೆ ರಿಟರ್ನ್ಸ್‌ ಸಲ್ಲಿಸಲು ಮರೆಯದಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.