ಬೆಂಗಳೂರು: ಹಬ್ಬದ ಋತುವಿನಲ್ಲಿ ರಾಜ್ಯದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೆ.ಜಿ ಬೆಳ್ಳುಳ್ಳಿ ಧಾರಣೆಯು ₹450 ದಾಟುವ ಅಂದಾಜು ಇದೆ.
ಹೆಚ್ಚಿನ ಮಳೆ, ವಾತಾವರಣದಲ್ಲಿನ ಏರುಪೇರಿನಿಂದ ರಾಜಸ್ಥಾನ ಮತ್ತು ಗುಜರಾತ್‌ನಿಂದ ಮಾರುಕಟ್ಟೆಗೆ ಬರುತ್ತಿದ್ದ ಬೆಳ್ಳುಳ್ಳಿ ಪ್ರಮಾಣದಲ್ಲಿ ಕುಸಿತವಾಗಿದೆ. ಇದರಿಂದ ದರ ಏರಿಕೆಯಾಗಿದೆ. ಮಧ್ಯಪ್ರದೇಶದಿಂದ ಸರಕು ಬರುತ್ತಿದ್ದರೂ ಆವಕ ಕಡಿಮೆ ಇದೆ. ಜನವರಿ ಇಲ್ಲವೇ ಫೆಬ್ರುವರಿಯಲ್ಲಿ ಹೊಸ ಬೆಳೆ ಬರಲಿದ್ದು, ಆಗಷ್ಟೇ ದರವು ಕಡಿಮೆಯಾಗಲಿದೆ ಎಂದು ಯಶವಂತಪುರ ಮಾರುಕಟ್ಟೆಯ ಬೆಳ್ಳುಳ್ಳಿ ವರ್ತಕ ಜುಬೇರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಪ್ರತಿನಿತ್ಯ 6 ಸಾವಿರದಿಂದ 7 ಸಾವಿರ ಚೀಲ (ಪ್ರತಿ ಚೀಲ 50 ಕೆ.ಜಿ) ಬೆಳ್ಳುಳ್ಳಿ ಮಾರುಕಟ್ಟೆಗೆ ಆವಕ ಆಗುತ್ತಿತ್ತು. ಅದು ಪ್ರಸ್ತುತ 2 ಸಾವಿರ ಚೀಲಕ್ಕೆ ಇಳಿದಿದೆ. ಇದರಿಂದ ದರದಲ್ಲಿ ಏರಿಕೆಯಾಗಿದೆ. ಪ್ರಸ್ತುತ ‘ಎ’ ದರ್ಜೆಯ ಬೆಳ್ಳುಳ್ಳಿ ಕೆ.ಜಿಗೆ ₹400 ಇದೆ. ಸಾಲು ಸಾಲು ಹಬ್ಬಗಳು ನಡೆಯುವ ಕಾರಣ ಬೆಳ್ಳುಳ್ಳಿಗೆ ಬೇಡಿಕೆ ಹೆಚ್ಚಲಿದ್ದು, ಬೆಲೆಯು ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಯಶವಂತಪುರದ ಮಾರುಕಟ್ಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ ಕ್ವಿಂಟಲ್ ಬೆಳ್ಳುಳ್ಳಿ ದರ ₹35 ಸಾವಿರದವರೆಗೆ ಇದೆ. ಸಗಟು ಮಾರುಕಟ್ಟೆಯಲ್ಲಿ ಕೆ.ಜಿ ಬೆಳ್ಳುಳ್ಳಿ ₹360 ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ₹400 ದಾಟಿದೆ.
‘ಬೆಳ್ಳುಳ್ಳಿ ದರ ಏರಿಕೆಯಲ್ಲಿರುವುದರಿಂದ ಹೆಚ್ಚಿನ ರೈತರು ಬೆಳ್ಳುಳ್ಳಿ ನಾಟಿ ಮಾಡಿದ್ದಾರೆ. ಈಗಾಗಲೇ ಬಿತ್ತನೆ ಮಾಡಿರುವ ಬೆಳ್ಳುಳ್ಳಿಯು ಸಂಕ್ರಾಂತಿ ವೇಳೆಗೆ ಕಟಾವಿಗೆ ಬರಲಿದ್ದು, ಫೆಬ್ರುವರಿಯಲ್ಲಿ ಕೆ.ಜಿ ದರ ₹150 ಆಗಲಿದೆ’ ಎಂದು ವರ್ತಕ ನಾಗರಾಜ್ ಹೇಳಿದ್ದಾರೆ.
ಮಧ್ಯಪ್ರದೇಶದ ಸಗಟು ಮಾರುಕಟ್ಟೆಯಲ್ಲಿ ಮಂಗಳವಾರ ಕೆ.ಜಿ ಬೆಳ್ಳುಳ್ಳಿ ₹400 ಆಗಿದೆ. ಕಳೆದ ಮೂರು ದಿನದ ವಹಿವಾಟಿನಲ್ಲಿ ₹50 ಹೆಚ್ಚಳವಾಗಿದೆ. ಅದರಿಂದ ಅಲ್ಲಿಯೇ ಉತ್ತಮ ಬೆಲೆ ದೊರೆಯುತ್ತಿರುವುದರಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಬರುತ್ತಿಲ್ಲ. ಒಂದು ವೇಳೆ ಮಾರುಕಟ್ಟೆಗೆ ಬಂದರೂ, ಸಾಗಣೆ ವೆಚ್ಚ ಇತರೆ ಸೇರಿ ₹420ಕ್ಕೂ ಹೆಚ್ಚು ದರ ಆಗಲಿದೆ ಎಂದು ಹೇಳಿದರು.
10 ದಿನಗಳಲ್ಲಿ ₹100 ಏರಿಕೆ
ಮಂಗಳೂರು: ಬೆಳ್ಳುಳ್ಳಿ ದರ ಏರುಗತಿಯಲ್ಲಿ ಸಾಗಿದ್ದು, 10 ದಿನಗಳಲ್ಲಿ ಪ್ರತಿ ಕೆ.ಜಿ.ಯ ಮೇಲೆ ₹100ರಷ್ಟು ಹೆಚ್ಚಳವಾಗಿದೆ. ಉತ್ತಮ ಗುಣಮಟ್ಟದ ಬೆಳ್ಳುಳ್ಳಿ ಕೆ.ಜಿ.ಯೊಂದಕ್ಕೆ ₹250 ಇದ್ದಿದ್ದು, ಪ್ರಸ್ತುತ ₹370ರಷ್ಟಾಗಿದೆ.
ಮೂರು ಮಾದರಿಯ ಬೆಳ್ಳುಳ್ಳಿ ಮಾರುಕಟ್ಟೆಗೆ ಬರುತ್ತದೆ. ಸಣ್ಣ ಗಾತ್ರದ ಬೆಳ್ಳುಳ್ಳಿಗೆ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹200 ರಷ್ಟು ಇತ್ತು, ಇದರ ಬೆಲೆ ಈಗ ₹300ಕ್ಕೆ ತಲುಪಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ ಎನ್ನುತ್ತಾರೆ ಬಂದರಿನ ವ್ಯಾಪಾರಿ ರಮೇಶ್.
‘ಒಂದು ತಿಂಗಳಿನಿಂದ ಬೆಳ್ಳುಳ್ಳಿ ದರ ಏರುತ್ತಲೇ ಇದೆ. ಈಗ ಮತ್ತಷ್ಟು ಹೆಚ್ಚಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ
₹400 ತಲುಪಿದೆ. ಬೆಳೆ ಕಡಿಮೆ ಆಗಿರುವ ಕಾರಣಕ್ಕೆ ದರ ಏರಿಕೆಯಾಗಿದ್ದು, ಸದ್ಯದಲ್ಲಿ ಪೂರೈಕೆಯಲ್ಲಿ ಕೊರತೆ ಆಗಿಲ್ಲ’ ಎನ್ನುತ್ತಾರೆ ಸಗಟು ವ್ಯಾಪಾರಿ ಲೋಕೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.