ಮುಂಬೈ: ಖಾಸಗಿ ಕ್ರಿಪ್ಟೊಕರೆನ್ಸಿಗಳನ್ನು ಬೆಳೆಯಲು ಬಿಟ್ಟರೆ ಮುಂದಿನ ದಿನಗಳಲ್ಲಿ ಅವು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ಬುಧವಾರ ಎಚ್ಚರಿಕೆ ನೀಡಿದ್ದಾರೆ.
ನಷ್ಟದ ಅಪಾಯ ಇರುವ ಬಿಟ್‌ಕಾಯಿನ್ ತರಹದ ಕ್ರಿಪ್ಟೊಕರೆನ್ಸಿಗಳ ಮೇಲೆ ಹೂಡಿಕೆಯನ್ನು ನಿಷೇಧಿಸುವ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಆರ್ಥಿಕತೆ ಮತ್ತು ಹಣಕಾಸು ಸ್ಥಿರತೆಯ ದೃಷ್ಟಿಯಿಂದ ಕ್ರಿಪ್ಟೊಕರೆನ್ಸಿಗಳುಹೆಚ್ಚಿನ ಅಪಾಯ ಹೊಂದಿವೆ ಎಂದು ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದ್ದಾರೆ.
ಕ್ರಿಪ್ಟೊಕರೆನ್ಸಿ ವಿನಿಮಯ ನಡೆಸುವ ಎಫ್‌ಟಿಎಕ್ಸ್ ಕಂಪನಿ ಕುಸಿದಿದ್ದು, ಅಮೆರಿಕದ ಇತಿಹಾಸದಲ್ಲಿಯೇ ಇದೊಂದು ದೊಡ್ಡ ಹಣಕಾಸು ವಂಚನೆ ಎಂದು ಕರೆಯಲಾಗುತ್ತಿದೆ. ಇಂತಹ ಹೂಡಿಕೆಗಳಿಂದ ಎದುರಾಗುವ ಅಪಾಯಗಳನ್ನು ಈ ಬೆಳವಣಿಗೆಯು ಸ್ಪಷ್ಟಪಡಿಸುತ್ತದೆ ಎಂದು ದಾಸ್ ಹೇಳಿದ್ದಾರೆ.
‘ಈ ಎಲ್ಲಾ ಬೆಳವಣಿಗೆಗಳ ಬಳಿಕ, ಕ್ರಿಪ್ಟೊಕರೆನ್ಸಿಗಳ ಕುರಿತ ನಮ್ಮ ನಿಲುವಿನ ಬಗ್ಗೆ ಇನ್ನೂ ಹೆಚ್ಚು ಹೇಳಬೇಕು ಎಂದು ನನಗೆ ಅನ್ನಿಸುತ್ತಿಲ್ಲ. ಖಾಸಗಿ ಕ್ರಿಪ್ಟೊಕರೆನ್ಸಿಗಳ ಮೌಲ್ಯವು ₹ 15.77 ಲಕ್ಷ ಕೋಟಿಯಿಂದ ₹ 11.62 ಲಕ್ಷ ಕೋಟಿಗೆ ಕುಸಿತ ಕಂಡಿದೆ’ ಎಂದು ಅವರು ತಿಳಿಸಿದ್ದಾರೆ.
‘ಕ್ರಿಪ್ಟೊಕರೆನ್ಸಿ ವಹಿವಾಟು ಶೇ 100ರಷ್ಟು ಊಹೆಗಳನ್ನು ಆಧರಿಸಿದೆ, ಅದನ್ನು ನಿಷೇಧಿಸಬೇಕು ಎನ್ನುವ ಅಭಿಪ್ರಾಯಕ್ಕೆ ಈಗಲೂ ಬದ್ಧ. ನೀವು ಅದನ್ನು ಕಾನೂನಿನ ವ್ಯಾಪ್ತಿಗೆ ತಂದು ಅದನ್ನು ಬೆಳೆಯಲು ಬಿಟ್ಟರೆ, ಆಗ ಖಾಸಗಿ ಕ್ರಿಪ್ಟೊಕರೆನ್ಸಿಗಳೇ ಮುಂದಿನ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಲಿವೆ.ನನ್ನ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ’ ಎಂದಿದ್ದಾರೆ.
ಕ್ರಿಪ್ಟೊಕರೆನ್ಸಿಗಳ ಬಗ್ಗೆ ಬೇರೆ ಬೆರೆ ದೇಶಗಳು ಭಿನ್ನ ನಿಲುವನ್ನು ಹೊಂದಿವೆ. ಆದರೆ, ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎನ್ನುವ ನಿಲುವಿಗೆ ಆರ್‌ಬಿಐ ಬದ್ಧವಾಗಿದೆ ಎಂದು ದಾಸ್ ಸ್ಪಷ್ಟಪಡಿಸಿದ್ದಾರೆ.
ವ್ಯವಸ್ಥೆಯನ್ನು ಮುರಿಯುವುದು ಕ್ರಿಪ್ಟೊಕರೆನ್ಸಿಗಳ ಹಿಂದಿರುವ ಉದ್ದೇಶ. ಕೇಂದ್ರೀಯ ಬ್ಯಾಂಕ್‌ಗಳು ಹೊರಡಿಸುವ ಕರೆನ್ಸಿಗಳಲ್ಲಿ ಹಾಗೂ ಕಾನೂನಿನ ಮೂಲಕ ನಿಯಂತ್ರಿಸಲಾಗುವ ಹಣಕಾಸು ವ್ಯವಸ್ಥೆಯಲ್ಲಿ ಅವುಗಳಿಗೆ ನಂಬಿಕೆ ಇಲ್ಲ ಎಂದು ದಾಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.