ನವದೆಹಲಿ: ಸರ್ಕಾರದ ಇ–ಮಾರುಕಟ್ಟೆ ಪೋರ್ಟಲ್ ಜಿಇಎಂನಿಂದ ಸರಕು ಮತ್ತು ಸೇವೆಗಳ ಖರೀದಿಯು 2023–24ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ₹4 ಲಕ್ಷ ಕೋಟಿ ದಾಟಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಹೆಚ್ಚಿನ ಖರೀದಿ ಚಟುವಟಿಕೆಗಳಿಂದಾಗಿ ಈ ಏರಿಕೆ ಆಗಿದೆ.
ಇಂದಿನ ಮಾಹಿತಿ ಪ್ರಕಾರ ಖರೀದಿಯ ಮೌಲ್ಯವು ₹3 ಲಕ್ಷ ಕೋಟಿ ದಾಟಿದ್ದು, ಇದೇ ರೀತಿ ಖರೀದಿ ಪ್ರವೃತ್ತಿ ಮುಂದುವರಿದರೆ ಪ್ರಸಕ್ತ ಹಣಕಾಸು ವರ್ಷದ ಕೊನೆಗೆ ₹4 ಲಕ್ಷ ಕೋಟಿ ದಾಟಬಹುದು ಎಂದು ಜಿಇಎಮ್‌ನ ಸಿಇಒ ಪಿ.ಕೆ.ಸಿಂಗ್ ಹೇಳಿದ್ದಾರೆ.
2021–22ರಲ್ಲಿ ₹1.06 ಲಕ್ಷ ಕೋಟಿ ಮತ್ತು 2022–23ರಲ್ಲಿ ₹2 ಲಕ್ಷ ಕೋಟಿ ಆನ್‌ಲೈನ್ ಖರೀದಿ ನಡೆದಿತ್ತು. ಕೋಲ್ ಇಂಡಿಯಾ, ಸೈಲ್, ಎನ್‌ಟಿಪಿಸಿ, ಎಸ್‌ಬಿಐ ಸೇರಿದಂತೆ 245ಕ್ಕೂ ಹೆಚ್ಚು ಕೇಂದ್ರೋದ್ಯಮಗಳು (ಸಿಪಿಎಸ್‌ಇ) ಈ ಖರೀದಿಯಲ್ಲಿ ಭಾಗವಹಿಸಿವೆ ಎಂದು ಹೇಳಿದ್ದಾರೆ.
ಈ ಆನ್‌ಲೈನ್ ಪೋರ್ಟಲ್‌ನಲ್ಲಿ ವಾಹನಗಳು, ಕಂಪ್ಯೂಟರ್‌ಗಳು, ಕಚೇರಿ ಪಿಠೋಪಕರಣಗಳು ಸೇರಿದಂತೆ ವಿವಿಧ ಬಗೆಯ ಸರಕುಗಳು ಲಭ್ಯ ಇವೆ. ಸಾಗಣೆ, ಸರಕು ಸಾಗಣೆ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ಸೇವೆಗಳೂ ಇಲ್ಲಿ ದೊರೆಯುತ್ತವೆ.
ಇ–ಮಾರುಕಟ್ಟೆ ಪೋರ್ಟಲ್‌ನಲ್ಲಿ ಭಾರತ ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ದಕ್ಷಿಣ ಕೊರಿಯಾ ಪ್ರಥಮ, ಸಿಂಗಪುರ ದ್ವಿತೀಯ ಸ್ಥಾನದಲ್ಲಿದೆ. ಉತ್ತರಪ್ರದೇಶ, ಗುಜರಾತ್, ಮಹಾರಾಷ್ಟ್ರ, ದೆಹಲಿ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಒರಿಸ್ಸಾ, ಬಿಹಾರ, ಅಸ್ಸಾಂ ಮತ್ತು ಉತ್ತರಾಖಂಡ ಪ್ರಸಕ್ತ ಹಣಕಾಸು ವರ್ಷದ ಖರೀದಿಯಲ್ಲಿ ಮುಂಚೂಣಿಯಲ್ಲಿವೆ.
2016ರ ಆಗಸ್ಟ್ 9ರಂದು ಸರ್ಕಾರಿ ಇ–ಮಾರುಕಟ್ಟೆ ಪೋರ್ಟಲ್ ಅನ್ನು ಆರಂಭಿಸಲಾಯಿತು. ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳು ತಮಗೆ ಬೇಕಾದ ಸರಕು ಮತ್ತು ಸೇವೆಗಳನ್ನು ಈ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಖರೀದಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.