ADVERTISEMENT

ಸರ್ಕಾರಿ ಇ–ಮಾರುಕಟ್ಟೆ: ಜಿಇಎಂ ದಾಖಲೆ ವಹಿವಾಟು

ಪಿಟಿಐ
Published 11 ಜುಲೈ 2024, 15:59 IST
Last Updated 11 ಜುಲೈ 2024, 15:59 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸರ್ಕಾರದ ಇ–ಮಾರುಕಟ್ಟೆ ಪೋರ್ಟಲ್‌ ಆದ ‘ಜಿಇಎಂ’ ಮೂಲಕ 2024–25ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರಕು ಮತ್ತು ಸೇವೆಗಳ ವಹಿವಾಟು ಮೌಲ್ಯವು ₹1.24 ಲಕ್ಷ ಕೋಟಿ ದಾಟಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ ಈ ಪೋರ್ಟಲ್‌ ವಿಶ್ವದ ಅತಿದೊಡ್ಡ ಆನ್‌ಲೈನ್‌ ವೇದಿಕೆಯಾಗಲಿದೆ ಎಂದು ಹೇಳಿದೆ. 

ಸರ್ಕಾರಿ ಕಚೇರಿಗಳು, ಸಾರ್ವಜನಿಕ ವಲಯದ ಉದ್ದಿಮೆಗಳು ಆನ್‌ಲೈನ್‌ ಮೂಲಕ ಸರಕು ಮತ್ತು ಸೇವೆಗಳನ್ನು ಪಡೆಯಲು ಅನುಕೂಲವಾಗುವಂತೆ 2016ರ ಆಗಸ್ಟ್‌ 9ರಂದು ಈ ಪೋರ್ಟಲ್‌ ಸ್ಥಾಪಿಸಲಾಗಿದೆ. ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ವೇಗ ಹೆಚ್ಚಿಸಲು ಈ ಪೋರ್ಟಲ್‌ ರೂಪಿಸಲಾಗಿದೆ.

ADVERTISEMENT

‘ಹಿಂದಿನ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಖರೀದಿ ಮೌಲ್ಯ ₹52,670 ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಶೇ 136ರಷ್ಟು ಬೆಳವಣಿಗೆ ದಾಖಲಿಸಿದೆ’ ಎಂದು ಜಿಇಎಂ ಸಿಇಒ ಪ್ರಶಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಸದ್ಯ ದಕ್ಷಿಣ ಕೊರಿಯಾದ ಕೆಒಎನ್‌ಇಪಿಎಸ್‌ ವಿಶ್ವದ ಅತಿದೊಡ್ಡ ಆನ್‌ಲೈನ್‌ ಖರೀದಿ ವೇದಿಕೆಯಾಗಿದೆ. ಜಿಇಎಂ ಎರಡನೇ ಸ್ಥಾನದಲ್ಲಿದೆ. ಸಿಂಗಪುರದ ಜಿಬಿಜ್‌ ವೇದಿಕೆಯು ಮೂರನೇ ಸ್ಥಾನದಲ್ಲಿದೆ.

ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳು ಖರೀದಿಸಿರುವ ಸರಕುಗಳ ಮೌಲ್ಯವು ₹ 1 ಲಕ್ಷ ಕೋಟಿ ದಾಟಿದೆ. ಕಲ್ಲಿದ್ದಲು, ರಕ್ಷಣೆ, ಪೆಟ್ರೋಲಿಯಂ ಮತ್ತು ಗ್ಯಾಸ್‌ ಸಚಿವಾಲಯಗಳ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಸೇವೆಗಳ ಖರೀದಿ ಮೌಲ್ಯವು ₹80,500 ಕೋಟಿ ದಾಟಿದೆ ಎಂದು ತಿಳಿಸಿದ್ದಾರೆ.

2023–24ನೇ ಆರ್ಥಿಕ ವರ್ಷದಲ್ಲಿ ಈ ಪೋರ್ಟಲ್‌ನಲ್ಲಿ ಖರೀದಿ ಮೌಲ್ಯವು ₹4 ಲಕ್ಷ ಕೋಟಿ ದಾಟಿತ್ತು. 

‘ಪೋರ್ಟಲ್‌ನಲ್ಲಿ ವಹಿವಾಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಜಿಇಎಂ ಸಹಾಯಕ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ. ಈ ಯೋಜನೆಯಡಿ ದೇಶದಾದ್ಯಂತ ತರಬೇತಿ ಮತ್ತು ಮಾನ್ಯತೆ ‍ಪಡೆದ 6 ಸಾವಿರದಿಂದ 7 ಸಾವಿರ ಸಹಾಯಕರನ್ನು ನಿಯೋಜಿಸಲಾಗುವುದು’ ಎಂದು ಪ್ರಶಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಕೊನೆಯ ಹಂತದಲ್ಲಿರುವ ಮಾರಾಟಗಾರರಿಗೂ ಅನುಕೂಲ ಕಲ್ಪಿಸಬೇಕಿದೆ. ಇದಕ್ಕಾಗಿ ಸಾರ್ವಜನಿಕ ಖರೀದಿಯನ್ನು ಮತ್ತಷ್ಟು ಸರಳೀಕರಣಗೊಳಿಸಲಾಗುವುದು 
ಪ್ರಶಾಂತ್ ಕುಮಾರ್ ಸಿಂಗ್ ಸಿಇಒ ಸರ್ಕಾರಿ ಇ–ಮಾರುಕಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.