ನವದೆಹಲಿ: ಸಾರ್ವಜನಿಕ ವಲಯದ 12 ಬ್ಯಾಂಕ್‌ಗಳ ಲಾಭದಲ್ಲಿ ಏರಿಕೆಯಾಗಿದೆ. ಹಾಗಾಗಿ, ಮಾರ್ಚ್ ಅಂತ್ಯದಲ್ಲಿ ಈ ಬ್ಯಾಂಕ್‌ಗಳ ಲಾಭಾಂಶ ಪಾವತಿಯು ₹15 ಸಾವಿರ ಕೋಟಿ ಮೀರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
2023–24ನೇ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಬ್ಯಾಂಕ್‌ಗಳು ₹98 ಸಾವಿರ ಕೋಟಿ ಲಾಭ ಗಳಿಸಿವೆ. 2022–23ನೇ ಹಣಕಾಸು ವರ್ಷದಲ್ಲಿ ಗಳಿಸಿದ ಒಟ್ಟು ₹1.05 ಲಕ್ಷ ಕೋಟಿ ಲಾಭಕ್ಕೆ ಹೋಲಿಸಿದರೆ ₹7,000 ಕೋಟಿಯಷ್ಟೇ ಕಡಿಮೆ ಇದೆ. 2021–22ರಲ್ಲಿ ₹66,539 ಕೋಟಿ ಲಾಭ ಗಳಿಸಿದ್ದವು.
ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಬ್ಯಾಂಕ್‌ಗಳಿಂದ ₹8,718 ಕೋಟಿ ಲಾಭಾಂಶ ಗಳಿಸಿತ್ತು. ಮೂರು ತ್ರೈಮಾಸಿಕಗಳಲ್ಲಿ ಬ್ಯಾಂಕ್‌ಗಳು ಗಳಿಸಿರುವ ಲಾಭದಲ್ಲಿ ಸರ್ಕಾರಕ್ಕೆ ₹13,804 ಕೋಟಿ ಲಾಭಾಂಶ ಲಭಿಸಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಶೇ 58ರಷ್ಟು ಏರಿಕೆಯಾಗಲಿದೆ.
‘2023–24ನೇ ಆರ್ಥಿಕ ವರ್ಷದ ಅಂತ್ಯದೊಳಗೆ ಬ್ಯಾಂಕ್‌ಗಳ ಲಾಭವು ಹಿಂದಿನ ಹಣಕಾಸು ವರ್ಷಕ್ಕಿಂತಲೂ ಹೆಚ್ಚಳವಾಗಲಿದೆ. ಹಾಗಾಗಿ, ಸರ್ಕಾರಕ್ಕೆ ಪಾವತಿಸುವ ಲಾಭಾಂಶದಲ್ಲೂ ಏರಿಕೆಯಾಗಲಿದೆ’ ಎಂದು ಮೂಲಗಳು ತಿಳಿಸಿವೆ.
ವಸೂಲಾಗದ ಸಾಲದ ಪ್ರಮಾಣವು (ಎನ್‌ಪಿಎ) ಶೇ 6ಕ್ಕಿಂತ ಕಡಿಮೆ ಇರುವ ಬ್ಯಾಂಕ್‌ಗಳಷ್ಟೇ ಲಾಭಾಂಶವನ್ನು ಘೋಷಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಜನವರಿಯಲ್ಲಿ ಪ್ರಕಟಿಸಿದ್ದ ಕರಡು ಮಾರ್ಗಸೂಚಿಯಲ್ಲಿ ಹೇಳಿದೆ. 2024–25ನೇ ಹಣಕಾಸು ವರ್ಷದಲ್ಲಿ ಈ ಹೊಸ ಮಾರ್ಗಸೂಚಿಗಳು ಜಾರಿಗೆ ಬರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.