ನವದೆಹಲಿ: ಹಿಂಗಾರು ಹಂಗಾಮಿನಲ್ಲಿ ಇದುವರೆಗೆ ಬೇಳೆಕಾಳುಗಳ ಬಿತ್ತನೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 18ರಷ್ಟು ಕಡಿಮೆಯಾಗಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಡಿಮೆ ಪ್ರಮಾಣದಲ್ಲಿ ಬಿತ್ತನೆಯಾಗಿರುವುದರಿಂದ ಒಟ್ಟಾರೆ ಬಿತ್ತನೆ ಪ್ರಮಾಣವು ಈ ಬಾರಿ 69.95 ಲಕ್ಷ ಹೆಕ್ಟೇರ್‌ಗೆ ಸೀಮಿತಗೊಂಡಿದೆ.
ಕೃಷಿ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ವರ್ಷದ ಹಿಂದಿನ 12.98 ಲಕ್ಷ ಹೆಕ್ಟೇರ್‌ಗೆ ಹೋಲಿಸಿದರೆ ಈ ಬಾರಿ ಕರ್ನಾಟಕದಲ್ಲಿ ಕೇವಲ 7.35 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿದೆ. ಉತ್ತರ ಮತ್ತು ದಕ್ಷಿಣ ಒಳನಾಡು ಪ್ರದೇಶದಲ್ಲಿ ತೀವ್ರ ಸ್ವರೂಪದ ಬರಗಾಲ ಕಂಡು ಬಂದಿದೆ. ಈ ಪ್ರದೇಶಗಳಲ್ಲಿ ಮುಂಗಾರಿನಲ್ಲಿಯೂ ಮಳೆ ಕೊರತೆ ಉಂಟಾಗಿತ್ತು.
ಮಹಾರಾಷ್ಟ್ರದಲ್ಲಿಯೂ ರೈತರು 2017–18ನೆ ಸಾಲಿನಲ್ಲಿನ 10.61 ಲಕ್ಷ ಹೆಕ್ಟೇರ್‌ಗೆ ಹೋಲಿಸಿದರೆ ಈ ಸಲ 5.62 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ 29.23ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿದೆ.
ದೇಶದಾದ್ಯಂತ ಹಿಂದಿನ ವರ್ಷ ಒಟ್ಟಾರೆ 85.32 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದರೆ, ಈ ಬಾರಿ ಅದರ ಪ್ರಮಾಣ 69.95 ಲಕ್ಷ ಹೆಕ್ಟೇರ್‌ಗೆ ಇಳಿದಿದೆ.
ಹಿಂಗಾರಿನ ಪ್ರಮುಖ ಬೆಳೆಯಾದ ಗೋಧಿಯನ್ನು 51.63 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ವರ್ಷದ ಹಿಂದೆ 54.28 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. ಅಕ್ಟೋಬರ್‌ನಲ್ಲಿ ಬಿತ್ತನೆ ಆರಂಭಗೊಳ್ಳುವ ಹಿಂಗಾರು ಹಂಗಾಮಿನ ಫಸಲು ಮಾರ್ಚ್‌ನಲ್ಲಿ ಕೊಯ್ಲಿಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.