ಜಿ.ಆರ್. ದೀಕ್ಷಿತ್, ಹಾವೇರಿ
ನಾನು ನನ್ನ ಪತ್ನಿ ಈರ್ವರೂ ನಿವೃತ್ತ ನೌಕರರು. ಪ್ರತೀ ವರ್ಷ ಆದಾಯ ತೆರಿಗೆ ರಿಟರ್ನ್ ತುಂಬುತ್ತೇವೆ. ಪಿಂಚಣಿ ಅನುಕ್ರಮವಾಗಿ₹ 30,000 ಹಾಗೂ 28,000 ಬರುತ್ತದೆ. ನನ್ನ ಮಗ ಎಂ.ಎನ್.ಸಿ.ಯಲ್ಲಿ ಕೆಲಸ ಮಾಡುತ್ತಾನೆ. ತಿಂಗಳ ಸಂಬಳ₹ 50,000. ನನ್ನ ಮತ್ತು ನನ್ನ ಪತ್ನಿಯ ಹೆಸರಿನಲ್ಲಿ ತಲಾ ಒಂದು ಫ್ಲ್ಯಾಟ್ ಇರುತ್ತದೆ. ಇವುಗಳನ್ನು ಮಾರಾಟ ಮಾಡಿದರೆ ಅಂದಾಜು ₹ 40 ಲಕ್ಷ ಬರಬಹುದು. ಈ ಹಣ ಮಗನಿಗೆ ವರ್ಗಾಯಿಸಿ ಬೆಂಗಳೂರಿನಲ್ಲಿ ಅದೇ ಹಣದಿಂದ ಮನೆ ಕೊಂಡರೆ ತೆರಿಗೆ ತಪ್ಪಿಸಬಹುದೇ.
ಉತ್ತರ: ನೀವು ಹಾಗೂ ನಿಮ್ಮ ಹೆಂಡತಿ ತಾ. 1–4–2019ರ ನಂತರ ತಲಾ₹ 5 ಲಕ್ಷ ವಾರ್ಷಿಕ ಪಿಂಚಣಿ ಪಡೆಯುವ ತನಕ ತೆರಿಗೆ ರಿಟರ್ನ್ ತುಂಬುವ ಅವಶ್ಯವಿಲ್ಲ. ನಿಮ್ಮ ಮಗ ತೆರಿಗೆ ಉಳಿಸಲು ಪಿ.ಪಿ.ಎಫ್., ಜೀವವಿಮೆ ಮಾಡಿ ವಾರ್ಷಿಕ ಕನಿಷ್ಠ₹ 1.50 ಲಕ್ಷದ ತನಕ ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ತಿಳಿಸಿರಿ. ಸಾಧ್ಯವಾದರೆ ಅವರ ಮುಂದಿನ ಭವಿಷ್ಯಕ್ಕೆ₹ 10,000, 10 ವರ್ಷಗಳ ಆರ್.ಡಿ. ಮಾಡುವಂತೆಯೂ ತಿಳಿಸಿರಿ. ನೀವು ನಿಮ್ಮೀರ್ವರ ಹೆಸರಿನಲ್ಲಿರುವ ಎರಡು ಫ್ಲ್ಯಾಟ್ ಮಾರಾಟ ಮಾಡಿ ಬರುವ ಹಣ ಬ್ಯಾಂಕಿನಲ್ಲಿ Capital Gain 1988ರಲ್ಲಿ ತೊಡಗಿಸಿ, ಮುಂದೆ ಮೂರು ವರ್ಷಗಳೊಳಗೆ ಈ ಹಣದಿಂದ ಮಗನಿಗೆ ಮನೆ ಖರೀದಿಸಲು ಹಣ ಕೊಡಿರಿ. ಇದರಿಂದ ತೆರಿಗೆ ಬರುವುದಿಲ್ಲ. ನೇರವಾಗಿ ಹಣ ಮಗನ ಹೆಸರಿಗೆ ವರ್ಗಾಯಿಸಿದರೆ ತೆರಿಗೆ ಬರುತ್ತದೆ. ನಿಮ್ಮ ಫ್ಲ್ಯಾಟ್ ಮಾರಾಟ ಮಾಡಿ ಇಲ್ಲಿ ಬರುವ ಸಂಪೂರ್ಣ ಹಣದಿಂದ ಬೆಂಗಳೂರಿನಲ್ಲಿ ಮನೆ ಅಥವಾ ಫ್ಲ್ಯಾಟ್ ಕೊಂಡರೆ Capital Gain Tax ಬರುವುದಿಲ್ಲ.
ಎಂ. ಕೆ. ಕಿಲ್ಲೆದಾರ, ಶಿರಸಿ
ಬಿ.ಕಾಂ. ಪದವೀಧರ. ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದೇನೆ. ಎಲ್ಲಾ ಕಡಿತದ ನಂತರ₹ 12,000 ಕೈ ಸೇರುತ್ತದೆ. ಮನೆ ಕಟ್ಟಲು₹ 20 ಲಕ್ಷ ಸಾಲ ಸಿಗಬಹುದೇ ತಿಳಿಸಿರಿ.
ಉತ್ತರ:₹ 20 ಲಕ್ಷ ಗೃಹ ಸಾಲಕ್ಕೆ ಮಾಸಿಕ ಸಾಲದ ಕಂತು₹ 20,000 ಬರುವುದರಿಂದ ನಿಮಗೆ ಸದ್ಯ ಗೃಹಸಾಲ ಸಿಗುವುದಿಲ್ಲ. ನೀವು ಬಿ.ಕಾಂ. ಪದವೀಧರರಾಗಿರುವುದರಿಂದ ಕೆ.ಎ.ಎಸ್. ಪರೀಕ್ಷೆ ಕಷ್ಟಪಟ್ಟು ಓದಿ ಪಾಸಾಗಿ ಡಿವೈಎಸ್‌ಪಿ ಆಗಿರಿ. ಇದೇ ವೇಳೆ ಇದು ಕಷ್ಟವಾದರೆ ಪಿಎಸ್‌ಐ ಪರೀಕ್ಷೆಗಾದರೂ ಕುಳಿತು ಪಾಸು ಮಾಡಿ ವೃತ್ತಿಯಲ್ಲಿ ಬಡ್ತಿ ಪಡೆಯಿರಿ. ಮುಂದೆ ಮನೆ ಕಟ್ಟಿಸಿಕೊಳ್ಳಿ, ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.
ಎಸ್.ಬಿ. ಹಿರೇಮಠ, ಕಲಬುರ್ಗಿ
ನಾನು ನನ್ನ ಹೆಂಡತಿ ಇಬ್ಬರೂ ಪ್ರಾಥಮಿಕ ಶಾಲಾ ಶಿಕ್ಷಕರು. ಇಬ್ಬರ ಸಂಬಳ₹ 52,000 ಇದ್ದರೂ₹ 22,000 ಬ್ಯಾಂಕ್ ಸಾಲ, ಮನೆ ಖರ್ಚು, ಬಾಡಿಗೆ₹ 20,000 ಕಳೆದು₹ 10,000 ಉಳಿಯುತ್ತದೆ. ಕಟ್ಟಿದ ಮನೆಕೊಳ್ಳಬೇಕೆಂದಿದ್ದೇನೆ. ಯಾವ ಬ್ಯಾಂಕಿನಲ್ಲಿ ಸಾಲ ಸಿಗಬಹುದು ತಿಳಿಸಿರಿ.
ಉತ್ತರ: ನೀವು ವೈಯಕ್ತಿಕವಾಗಿ ಪಡೆದಿರುವ ಸಾಲ ತೀರಿಸುವ ತನಕ ಸ್ವಂತಮನೆ ಖರೀದಿಸುವ ಸಾಮರ್ಥ್ಯ ನಿಮಗಿರುವುದಿಲ್ಲ. ಕಟ್ಟಿದ ಮನೆಕೊಳ್ಳಲು ಕನಿಷ್ಠ₹ 50 ಲಕ್ಷವಾದರೂ ಬೇಕು.₹ 50 ಲಕ್ಷ ಸಾಲಕ್ಕೆ₹ 50,000 EMI ಕಟ್ಟ ಬೇಕಾಗುತ್ತದೆ. ಇವೆಲ್ಲವನ್ನೂ ಬ್ಯಾಂಕಿನವರು ಸಾಲ ಕೊಡುವ ಮುನ್ನ ಪರಿಶೀಲಿಸುತ್ತಾರೆ. ಆದಷ್ಟು ಬೇಗ ಸಾಲ ಮುಕ್ತರಾಗಲು ಪ್ರಯತ್ನಿಸಿರಿ. ₹ 10,000, 5 ವರ್ಷಗಳ ಆರ್.ಡಿ. ಮಾಡಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.