ADVERTISEMENT

ಪ್ರಶ್ನೋತ್ತರ: ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪರಿಹಾರ

ಯು.ಪಿ.ಪುರಾಣಿಕ್
Published 22 ಸೆಪ್ಟೆಂಬರ್ 2020, 22:34 IST
Last Updated 22 ಸೆಪ್ಟೆಂಬರ್ 2020, 22:34 IST
ಪುರಾಣಿಕ್
ಪುರಾಣಿಕ್   

ಡಿ.ಎಚ್. ರಾಜಶೇಖರ, ಚಿತ್ರದುರ್ಗ

*

ಪ್ರಶ್ನೆ: ನಿಮ್ಮ ಸಲಹೆಯಂತೆ ಆರ್‌.ಡಿ. ಮಾಡಿ, ಗೃಹಸಾಲ ಪಡೆದು ಮನೆ ಕಟ್ಟಿಸಿ, ಇಬ್ಬರುಮಕ್ಕಳ ಮದುವೆಯನ್ನೂ ಮಾಡಿದ್ದೇನೆ. ನಿಮ್ಮ ಸಕಾಲಿಕ ಹಾಗೂ ನೇರ ಸಲಹೆಗಳಿಗೆ ಅಭಿನಂದನೆ. ನಾನು ಗ್ರಾಮೀಣ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್. ಪಿಂಚಣಿ ಕಮ್ಯುಟೇಶನ್‌ ಮಾಡಿ ಹಣ ಪಡೆದಿದ್ದೇನೆ. 15 ವರ್ಷಗಳ ತನಕ ಸಂಪೂರ್ಣ ಪಿಂಚಣಿ ಗ್ಯಾರಂಟಿ ಇದೆಯೇ? ಈ ಹಣಕ್ಕೆ ಬಡ್ಡಿ ಇದೆಯೇ?

ಉತ್ತರ: ಪಿಂಚಣಿದಾರರು ಮೂಲ ಪಿಂಚಣಿ ಮೊತ್ತದ ಮೂರನೇ ಒಂದು ಭಾಗವನ್ನು ನಿವೃತ್ತಿ ಹೊಂದುವಾಗ ಕಮ್ಯುಟೇಶನ್‌ ರೂಪದಲ್ಲಿ ಪಡೆಯಬಹುದು.

ಕಮ್ಯುಟೇಶನ್‌ ಸೂತ್ರ: ಮೂಲ ಪಿಂಚಣಿಯ ಮೂರನೇ ಒಂದು ಭಾಗX12Xಫ್ಯಾಕ್ಟರ್‌ = ಕಮ್ಯುಟೇಷನ್‌ ಮೊತ್ತ

ADVERTISEMENT

ನಿವೃತ್ತಿ ಹೊಂದುವ ವ್ಯಕ್ತಿಯ ವಯಸ್ಸಿಗೆ ಅನುಗುಣವಾಗಿ ಫ್ಯಾಕ್ಟರ್‌ ನಿರ್ಧರಿಸಲಾಗುತ್ತದೆ. ನೀವು 60 ವರ್ಷಕ್ಕೆ ನಿವೃತ್ತರಾದಲ್ಲಿ ಫ್ಯಾಕ್ಟರ್‌ ವ್ಯಾಲ್ಯು ₹ 10.46. ಮೇಲಿನ ಕೋಷ್ಠಕದಲ್ಲಿ 12 ಅಂದರೆ 12 ತಿಂಗಳು ಎಂದರ್ಥ. ನಿಮ್ಮ ಮೂಲ ಪಿಂಚಣಿ ಮೊತ್ತ ₹ 30 ಸಾವಿರ ಆದಲ್ಲಿ ₹ 30 ಸಾವಿರದ ಮೂರನೇ ಒಂದು ಭಾಗ ಅಂದರೆ ₹ 10 ಸಾವಿರ ಕಮ್ಯುಟೇಷನ್ ಪಡೆಯಬಹುದು. ನಿವೃತ್ತಿಯ ನಂತರ 15 ವರ್ಷ ಮುಗಿಯುತ್ತಲೇ ನೀವು ಸಂಪೂರ್ಣ ಪಿಂಚಣಿ ಪಡೆಯುವುದರಲ್ಲಿ ಸಂಶಯವಿಲ್ಲ. ಇದರಲ್ಲಿ ಬಡ್ಡಿ ಅಡಕವಾಗಿರುತ್ತದೆ. ಒಂದು ಒಳ್ಳೆಯ ವಿಚಾರವೆಂದರೆ ಪಿಂಚಣಿ ಪಡೆಯುವ ವ್ಯಕ್ತಿ ನಿವೃತ್ತಿಯಿಂದ ಇಲ್ಲಿ ವಿವರಿಸಿದಂತೆ ಕಮ್ಯುಟೇಷನ್ ಹಣ ಮುಂದಾಗಿ ಪಡೆದರೂ ಡಿ.ಎ. ಲೆಕ್ಕಾಚಾರ ಮಾಡುವಾಗ ಸಂಪೂರ್ಣ ಮೂಲ ಪಿಂಚಣಿ ಮೊತ್ತದ ಮೇಲೆ ಪ್ರಾರಂಭದಿಂದಲೇ ಡಿ.ಎ. ಪಡೆಯಬಹುದು.

ವಿಜಯೇಂದ್ರ, ಮೈಸೂರು

*ಪ್ರಶ್ನೆ: ನಾನು ನಿಮ್ಮ ಅಭಿಮಾನಿ. ಬಹಳ ವರ್ಷಗಳಿಂದ ನಿಮ್ಮ ಅಂಕಣ ಓದುತ್ತಿದ್ದೇನೆ. ಪ್ರಧಾನ ಮಂತ್ರಿ ವಯೋವಂದನಾ ಯೋಜನೆ ಬಗ್ಗೆ ಸಾಕಷ್ಟು ಪ್ರಚಾರವಿಲ್ಲದ ಕಾರಣ ಬಹಳಷ್ಟು ಹಿರಿಯ ನಾಗರಿಕರು ಯೋಜನೆಯ ಫಲ ಪಡೆಯುತ್ತಿಲ್ಲ. ಈ ವಿಚಾರದಲ್ಲಿ ವಿವರಣೆ ನೀಡಬೇಕೆಂದು ವಿನಂತಿ.

ಉತ್ತರ: ಈಗ ಬ್ಯಾಂಕ್‌ ಠೇವಣಿ ಬಡ್ಡಿದರದಲ್ಲಿ ಕಡಿತವಾಗುತ್ತಿರುವುದರಿಂದ ಬಡ್ಡಿ ಹಣದಿಂದಲೇ ಜೀವನ ಸಾಗಿಸುವ ಹಿರಿಯ ನಾಗರಿಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ಮನಗಂಡ ಕೇಂದ್ರ ಸರ್ಕಾರ, ಹಿರಿಯ ನಾಗರಿಕರಿಗಾಗಿಯೇ ಪ್ರಧಾನ ಮಂತ್ರಿ ವಯೋವಂದನಾ ಯೋಜನೆ ಜಾರಿಗೊಳಿಸಿದೆ. ಇದರ ವೈಶಿಷ್ಟ್ಯಗಳು ಹೀಗಿವೆ.

*ಠೇವಣಿ ಅವಧಿ 10 ವರ್ಷ

*ಬಡ್ಡಿ ದರ ಶೇಕಡ 7.4 (ಅವಧಿಯಲ್ಲಿ ಬಡ್ಡಿ ಬದಲಾಗುವುದಿಲ್ಲ)

*ವಯೋಮಿತಿ 60 ವರ್ಷ ಮುಗಿದಿರಬೇಕು

*ನಾಮ ನಿರ್ದೇಶನ ಸೌಲಭ್ಯವಿದೆ

*ಗರಿಷ್ಠ ಮಿತಿ ₹ 15 ಲಕ್ಷ

*ದಂಪತಿಗೆ 60 ವರ್ಷ ದಾಟಿದಲ್ಲಿ ₹ 15 ಲಕ್ಷದಂತೆ ಇಬ್ಬರ ಹೆಸರಿನಲ್ಲಿ ಗರಿಷ್ಠ ₹ 30 ಲಕ್ಷ ಇರಿಸಬಹುದು.

*ಅವಧಿ ಮುನ್ನ ಅಸಲು ಪಡೆಯುವಂತಿಲ್ಲ. ಆದರೆ, ಠೇವಣಿದಾರ ಮರಣ ಹೊಂದಿದಲ್ಲಿ ನಾಮ ನಿರ್ದೇಶನದಂತೆ ವ್ಯಕ್ತಿಗಳು ಅವಧಿಗೆ ಮುನ್ನ ಹಣ ಪಡೆಯಬಹುದು

*15 ಎಚ್‌ ನಮೂನೆ ಸಲ್ಲಿಸಿ ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್‌) ಆಗದಂತೆ ನೋಡಿಕೊಳ್ಳಬಹುದು

*ಬಡ್ಡಿ ಪಾವತಿ ಪ್ರತಿ ತಿಂಗಳು, ಮೂರು ತಿಂಗಳಿಗೊಮ್ಮೆ ಅಥವಾ ವಾರ್ಷಿಕ (ಯಾವುದನ್ನಾದರೂ ಆರಿಸಿಕೊಳ್ಳಬಹುದು)

*ಈ ಹೂಡಿಕೆ ಎಲ್‌ಐಸಿಯಲ್ಲಿ ಲಭ್ಯವಿದೆ

*ಈ ಠೇವಣಿಯ ಬಾಂಡಿನ ಮೇಲೆ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಬಹುದು

*ಆದಾಯ ತೆರಿಗೆ ವಿನಾಯಿತಿ ಸೆಕ್ಷನ್‌ 80ಸಿ ಅನ್ವಯವಾಗುವುದಿಲ್ಲ.

***

ತಿದ್ದುಪಡಿ: ತಾ 16/9/2020ರಂದು ಪ್ರಕಟವಾದ ಟಿ.ವಿ. ಕಳಸೂರು ಅವರ ಪ್ರಶ್ನೆಗೆ ಸಂಬಂಧಿಸಿದಂತೆ ಕಾಸ್ಟ್‌ ಆಫ್‌ ಇನ್‌ಫ್ಲೇಷನ್‌ ಇಂಡೆಕ್ಸ್‌ (ಸಿಐಐ) ಕಂಡುಕೊಳ್ಳುವ ಮೂಲ ವರ್ಷ 1981ರಿಂದ 2001ಕ್ಕೆ ಬದಲಾಯಿಸಿ ಸಿಐಐ 100 ಎಂದು ನಿಗದಿಪಡಿಸಿರುವುದರಿಂದ 2001ರ ಮೊದಲು ಕೊಂಡ ಆಸ್ತಿ ಬೆಲೆ 2001ರ ಸರ್ಕಾರಿ ಬೆಲೆ ನಿರ್ಧರಿಸಿ ಲೆಕ್ಕ ಹಾಕಬಹುದಾಗಿದೆ. ಈ ಪ್ರಶ್ನೆಯಲ್ಲಿ ಉದಾಹರಣೆಗೆ 1992ರಲ್ಲಿ ಕೊಂಡ ನಿವೇಶನದ ಬೆಲೆ 2001ರಲ್ಲಿ ಸರ್ಕಾರಿ ಬೆಲೆ ₹ 2 ಲಕ್ಷವಾದಲ್ಲಿ 280X 2 ಲಕ್ಷ, 5.6 ಲಕ್ಷ100

₹ 19 ಲಕ್ಷದಲ್ಲಿ ₹ 5.60 ಲಕ್ಷ ಕಳೆದಾಗ ಬರುವ ₹ 13.40 ಲಕ್ಷಕ್ಕೆ ಶೇ 20ರಂತೆ ₹ 2.68 ಲಕ್ಷ ಬಂಡವಾಳ ವೃದ್ಧಿ ತೆರಿಗೆ ಕೊಡಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.