ADVERTISEMENT

ಪ್ರಶ್ನೋತ್ತರ: ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪರಿಹಾರ ಇಲ್ಲಿದೆ

ಯು.ಪಿ.ಪುರಾಣಿಕ್
Published 15 ಡಿಸೆಂಬರ್ 2020, 19:31 IST
Last Updated 15 ಡಿಸೆಂಬರ್ 2020, 19:31 IST
ಪುರಾಣಿಕ್
ಪುರಾಣಿಕ್   

ವಿನಾಯಕ, ವಿಜಯಪುರ

* ಪ್ರಶ್ನೆ: ನನ್ನ ತಂದೆ ಸರ್ಕಾರಿ ನೌಕರರಾಗಿದ್ದು, ಪ್ರಸ್ತುತ ₹ 19,950–₹ 37,900 ವೇತನ ಶ್ರೇಣಿಯಲ್ಲಿದ್ದಾರೆ. ಅವರ ಮೂಲ ವೇತನ ₹ 37 ಸಾವಿರ. ತುಟ್ಟಿಭತ್ಯೆ ಸೇರಿ ₹ 49 ಸಾವಿರ ಬರುತ್ತದೆ. ಕಡಿತದ ನಂತರ ₹ 35 ಸಾವಿರ ಸಿಗುತ್ತಿದೆ. ನಿವೃತ್ತಿ ನಂತರ ಎಷ್ಟು ಪಿಂಚಣಿ ಬರಬಹುದು? ನಿವೃತ್ತಿಯಾದಾಗ ಯಾವೆಲ್ಲ ಹಣ ಬರಲಿವೆ? ತಂದೆ ಹೆಸರಿನಲ್ಲಿ ನಿವೇಶನ ಇದ್ದು, ಮಕ್ಕಳು ಮನೆ ಸಾಲ ತೆಗೆದುಕೊಳ್ಳಬಹುದೇ? ತಂದೆಯವರು 2022ರಲ್ಲಿ ನಿವೃತ್ತಿಯಾಗುತ್ತಾರೆ.

ಉತ್ತರ: ನಿಮ್ಮ ತಂದೆಯವರು ಪಿಂಚಣಿ ಸವಲತ್ತಿಗೆ ಒಳಪಟ್ಟಿದ್ದು, ಅವರು ಪಡೆಯುವ ಮೂಲ ವೇತನದ ಶೇಕಡ 50ರಷ್ಟು ಪಿಂಚಣಿ ಸಿಗಬಹುದು. ಮೂಲ ವೇತನದ 1/3 ಅಂಶವನ್ನು ಕಮ್ಯುಟೇಷನ್‌ ನಿಯಮದಂತೆ ನಿವೃತ್ತಿಗೂ ಮೊದಲೇ ಪಡೆಯಬಹುದು. ಇವರು ಕಟ್ಟಿರುವ ಪಿ.ಎಫ್‌. ಹಣ ಮತ್ತು ಬಡ್ಡಿ, ರಜಾ ಸಂಬಳ ಕೂಡ ಪಡೆಯಬಹುದು. ಒಟ್ಟಿನಲ್ಲಿ ₹ 30 ಲಕ್ಷ ನಿವೃತ್ತಿಯಿಂದ ಬರಬಹುದು. ಹೀಗೆ ಪಡೆಯುವ ಹಣಕ್ಕೆ ಆದಾಯ ತೆರಿಗೆ ಇರುವುದಿಲ್ಲ. ಆದರೆ, ರಜಾ ಸಂಬಳ ನಗದೀಕರಿಸುವಾಗ ಮಾತ್ರ ಸೆಕ್ಷನ್‌ 10(ಎಎ) ಪ್ರಕಾರ ಗರಿಷ್ಠ ಮಿತಿ ₹ 3 ಲಕ್ಷ ಇರುತ್ತದೆ. ಇವರು ಸಾಮಾನ್ಯವಾಗಿ ತಿಂಗಳಿಗೆ ₹ 25 ಸಾವಿರ ಪಿಂಚಣಿ ಪಡೆಯಬಹುದು. ತಂದೆಯವರ ನಿವೇಶನದಲ್ಲಿ ಮಕ್ಕಳು ಮನೆ ಕಟ್ಟುವ ವಿಚಾರ: ಮನೆ ಸಾಲ ದೀರ್ಘಾವಧಿಯದ್ದಾಗಿದ್ದು, ನಿಮ್ಮ ತಂದೆಯವರಿಗೆ ಬ್ಯಾಂಕ್‌ನಲ್ಲಿ ಈ ವಿಚಾರದಲ್ಲಿ ಸಾಲ ದೊರೆಯುವುದಿಲ್ಲ. ಆದರೆ ಮಕ್ಕಳು ಸಹ ಸಾಲಗಾರರಾಗಿ ಸಾಲ ತೀರಿಸುವ ಜವಾಬ್ದಾರಿ ಹೊತ್ತರೆ ಬ್ಯಾಂಕ್‌ಗಳು ಗೃಹ ಸಾಲ ಮಂಜೂರು ಮಾಡಬಹುದು.

ADVERTISEMENT

ಗವಿಸಿದ್ದಪ್ಪ, ಸಾಗರ
*
ಪ್ರಶ್ನೆ: ನಾನು ಪ್ರಾಥಮಿಕ ಶಾಲಾ ಶಿಕ್ಷಕ. 2016ರಲ್ಲಿ ಆಯ್ಕೆಗೊಂಡಿದ್ದೇನೆ. ಕನಿಷ್ಠ 21 ವರ್ಷ ಸೇವಾವಧಿ ಇದೆ. ನನ್ನ ಉಳಿತಾಯ: ಕೆಜಿಐಡಿ ₹ 3 ಸಾವಿರ, ಎನ್‌ಪಿಎಸ್‌ ₹ 3,600, ಪಿಎಲ್‌ಐ ₹ 2 ಸಾವಿರ, ಸುಕನ್ಯಾ ಸಮೃದ್ಧಿ ಯೋಜನೆ ₹ 1,000. ಎನ್‌ಪಿಎಸ್‌ನಲ್ಲಿ ತೊಡಗಿಸಿದ್ದ ಹಣ ನಿವೃತ್ತಿ ಹೊಂದಿದ ನಂತರ ಎಷ್ಟು ಬರುತ್ತದೆ? ಬೇರೆ ಉಳಿತಾಯ ಬೇಕೇ? ಎನ್‌ಪಿಎಸ್‌ನಲ್ಲಿ ಗ್ರ್ಯಾಚುಟಿ ಮತ್ತು ಕಮ್ಯುಟೇಷನ್‌ ನೀಡುತ್ತಾರೆಯೇ?

ಉತ್ತರ: ನಿಮ್ಮ ಸಂಬಳದ ನಿರ್ವಹಣೆ ಕೊಟ್ಟಿಲ್ಲ. ಉಳಿತಾಯ ಚೆನ್ನಾಗಿದೆ. ಅವುಗಳನ್ನು ಮುಂದುವರಿಸಿ. ಸಾಧ್ಯವಾದರೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ ₹ 2 ಸಾವಿರದಿಂದ ₹ 3 ಸಾವಿರ ತುಂಬಿ. ನಿಮ್ಮ ಹೆಣ್ಣು ಮಗುವಿನ ಸಲುವಾಗಿ ಕನಿಷ್ಠ 10 ಗ್ರಾಂ ಬಂಗಾರದ ನಾಣ್ಯ ಪ್ರತಿ ವರ್ಷವೂ ಕೊಳ್ಳಿರಿ. ಇದಕ್ಕಾಗಿ ತಿಂಗಳಿಗೆ ₹ 5,000 ಮೊತ್ತದ ಆರ್‌.ಡಿ.ಯನ್ನು ಒಂದು ವರ್ಷದ ಅವಧಿಗೆ ಮಾಡಿ. ಇದನ್ನು ಮಗುವಿನ ಮದುವೆಯ ತನಕ ಮುಂದುವರಿಸಿ. ಎನ್‌ಪಿಎಸ್‌ನಿಂದ ಎಷ್ಟು ಬರಬಹುದು ಎಂದು ಈಗಲೇ ತಿಳಿಯುವುದು ಕಷ್ಟ. ಗ್ರ್ಯಾಚುಟಿಗೂ ಎನ್‌ಪಿಎಸ್‌ಗೂ ಸಂಬಂಧವಿಲ್ಲ. ಪಿಂಚಣಿದಾರರಿಗೆ ಮಾತ್ರ ಕಮ್ಯುಟೇಷನ್‌ ಇರುತ್ತದೆ. ಪಿಂಚಣಿ ಸೌಲಭ್ಯ ಇಲ್ಲದೇ ಇರುವುದರಿಂದ ನಿಮಗೆ ಕಮ್ಯುಟೇಷನ್‌ ಇರುವುದಿಲ್ಲ.

ಅಖಂಡೇಶ್ವರಯ್ಯ ಹಿರೇಮಠ, ಬಿಳ್ಹಾರ (ಯಾದಗಿರಿ ಜಿಲ್ಲೆ)

* ಪ್ರಶ್ನೆ: ನಾನು ನಿವೃತ್ತ ಉಪನ್ಯಾಸಕ. ವಯಸ್ಸು 65 ವರ್ಷ. ನನ್ನ ನಿವೃತ್ತಿ ಹಣದಿಂದ ನನ್ನ ಮಗನ ಹೆಸರಿನಲ್ಲಿ 2.04 ಎಕರೆ ಜಮೀನು ಕೊಂಡಿದ್ದು, ಇದರಲ್ಲಿ ಈಗ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ. ಸರ್ಕಾರದಿಂದ ಪರಿಹಾರದ ಹಣ ಬರಲಿದೆ. ಇದರ ಜೊತೆ ನನ್ನ ಹೆಸರಿನಲ್ಲಿದ್ದ ಪಿತ್ರಾರ್ಜಿತ ಆಸ್ತಿಯ ಒಂದು ಭಾಗ ಕೂಡ ರಸ್ತೆಗೆ ಸೇರುತ್ತದೆ. ತೆರಿಗೆ ಉಳಿಸಲು ಹಾಗೂ ಹಣ ತೊಡಗಿಸಲು ಮಾರ್ಗದರ್ಶನ ಮಾಡಿ.

ಉತ್ತರ: ನೀವು ಖರೀದಿಸಿದ ಜಮೀನು ಹಾಗೂ ಪಿತ್ರಾರ್ಜಿತವಾಗಿ ಬಂದ ಜಮೀನು ಕೃಷಿ ಭೂಮಿಯಾಗಿದ್ದರೆ ಬಂಡವಾಳ ವೃದ್ಧಿ (u/s 48) ಆಧಾರದ ಮೇಲೆ ಸಂಪುರ್ಣ ಬಂಡವಾಳ ವೃದ್ಧಿ ತೆರಿಗೆ ವಿನಾಯಿತಿ ಪಡೆಯಬಹುದು. ಕೃಷಿ ಜಮೀನಾಗಿದ್ದರೂ 10 ಸಾವಿರ ಜನಸಂಖ್ಯೆ ಇರುವ ಪಟ್ಟಣದಿಂದ 8 ಕಿ.ಮೀ ದೂರ ಇದ್ದರೆ ಮಾತ್ರ ವಿನಾಯಿತಿ ಇದೆ. ಬಂಡವಾಳ ವೃದ್ಧಿಯ ತೆರಿಗೆ ದರ ಸದ್ಯ ಶೇ 20ರಷ್ಟಿದೆ. ತೆರಿಗೆ ಉಳಿಸಲು ಗರಿಷ್ಠ ₹ 50 ಲಕ್ಷವನ್ನು ಎನ್‌ಎಚ್‌ಎಐ ಅಥವಾ ಆರ್‌ಇಸಿ ಬಾಂಡ್‌ಗಳಲ್ಲಿ ತೊಡಗಿಸಬಹುದು ಅಥವಾ ಈ ಹಣದಿಂದ ಇನ್ನೊಂದು ಮನೆ ಕೊಳ್ಳಬಹುದು. ನಿವೇಶನವಷ್ಟನ್ನೇ ಕೊಳ್ಳುವಂತಿಲ್ಲ. ಆಸ್ತಿಯಿಂದ ಹಣ ಬರುವುದರಿಂದ ಸಮೀಪದ ಚಾರ್ಟರ್ಡ್‌ ಅಕೌಂಟೆಂಟ್‌ ಅಥವಾ ಆಡಿಟರ್‌ ಮುಖಾಂತರ ಐ.ಟಿ. ರಿಟರ್ನ್ಸ್‌ ತುಂಬಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.