ADVERTISEMENT

ಹಣಕಾಸು ಸಂಬಂಧಿ ಸಮಸ್ಯೆಗಳ ಪರಿಹಾರಕ್ಕೆ ಇಲ್ಲಿದೆ ಉತ್ತರ

ಪ್ರಶ್ನೋತ್ತರ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 19:30 IST
Last Updated 25 ಜೂನ್ 2019, 19:30 IST
   

ಪ್ರಮೋದ್, ಹುಬ್ಬಳ್ಳಿ

ಸಹಕಾರ ಸಂಘಗಳಲ್ಲಿ ಇರಿಸಿದ ಠೇವಣಿಗೆ ಟಿಡಿಎಸ್ ಇದೆಯೇ ಹಾಗೂ ಇಲ್ಲಿ ಬರುವ ಬಡ್ಡಿ ಆದಾಯ ತೆರಿಗೆಯಿಂದ ವಿನಾಯಿತಿ ಹೊಂದಿದೆಯೇ ?

ಉತ್ತರ: ಸಹಕಾರ ಸಂಘಗಳಲ್ಲಿ ಠೇವಣಿಯ ಮೇಲೆ ಬರುವ ಬಡ್ಡಿಯ ಮೂಲದಲ್ಲಿ ತೆರಿಗೆ ಮುರಿಯುವುದಿಲ್ಲ (No TDS) ಆದರೆ ಇಲ್ಲಿ ಬರುವ ಬಡ್ಡಿ ಹಣ ತೆರಿಗೆ ಮುಕ್ತವಲ್ಲ. ಬಡ್ಡಿ ಪಡೆಯುವ ವ್ಯಕ್ತಿ, ಈ ಹಣ ಉಳಿದ ಆದಾಯಕ್ಕೆ ಸೇರಿಸಿ ತೆರಿಗೆ ಬರುವಲ್ಲಿ ತೆರಿಗೆ ಕೊಡಬೇಕಾಗುತ್ತದೆ.

ADVERTISEMENT

- ಚಂದ್ರಶೇಖರ್, ಹಾಸನ

ಮಗ ಅಮೆರಿಕದಲ್ಲಿದ್ದು ಅವನ ಗಳಿಕೆಯಿಂದ ನನ್ನ ಖಾತೆಗೆ ಅಂದರೆ ಹಾಸನದ ಬ್ಯಾಂಕ್ ಖಾತೆಗೆ ಹಣ ಕಳಿಸಿದರೆ ತೆರಿಗೆ ಬರುತ್ತದೆಯೇ. ಅದೇ ರೀತಿ ಅವನು ಅಮೆರಿಕದಿಂದ ಹಾಸನದಲ್ಲಿನ ಅವನ ಖಾತೆಗೆ ಹಣ ಕಳಿಸಿದರೆ ತೆರಿಗೆ ಇದೆಯೇ ತಿಳಿಸಿರಿ.

ಉತ್ತರ: ನಿಮ್ಮ ಮಗ ನಿಮ್ಮ ಖಾತೆಗೆ ಹಣ ಕಳಿಸಿದರೆ ನಿಮಗೂ ನಿಮ್ಮ ಮಗನಿಗೂ ತೆರಿಗೆ ಬರುವುದಿಲ್ಲ. ನೀವು ಹಾಗೆ ಬಂದ ಹಣದಿಂದ ಮುಂದೆ ಪಡೆಯುವ ಬಡ್ಡಿಗೆ ತೆರಿಗೆ ಇದೆ. ನಿಮ್ಮ ಮಗ ಅನಿವಾಸಿ ಭಾರತೀಯನಾಗಿದ್ದು (NRI) ಆತನ NRI SB ಖಾತೆಗೆ ಅಥವಾ (Non-Resident External) NRE Deposit ಮಾಡಿದಲ್ಲಿ ತೆರಿಗೆ ಬರುವುದಿಲ್ಲ.

- ಪಲ್ಲವಿ, ದಾವಣಗೆರೆ

ನನ್ನ ಅಜ್ಜ ನನಗೆ ₹ 90,000ಗಳ Gift ಕೊಟ್ಟಿದ್ದಾರೆ. ನಾನು ವಿದ್ಯಾರ್ಥಿ. ಈ ಹಣ ನನ್ನ ವಿದ್ಯಾಭ್ಯಾಸ, ಮದುವೆ ಕುರಿತಾಗಿದೆ. ಹೆಚ್ಚಿನ ಬಡ್ಡಿ ಬರಲು ಏನು ಮಾಡಬೇಕು. ನನ್ನ ಪದವಿ ಮುಗಿಯಲು ಒಂದು ವರ್ಷವಿದೆ.

ಉತ್ತರ: ನೀವು ₹ 90,000 ನಿಮ್ಮ ಮನೆಗೆ ಸಮೀ‍ಪದ ಬ್ಯಾಂಕಿನಲ್ಲಿ ಒಮ್ಮೆಲೇ ಬಡ್ಡಿ ಬರುವ ಠೇವಣಿ (Reinvestment Deposit) ನಲ್ಲಿ ಒಂದು ವರ್ಷಕ್ಕೆ ಇಡಿರಿ. ಒಂದು ವೇಳೆ ಒಂದು ವರ್ಷದ ನಂತರ ಈ ಹಣ ಅವಶ್ಯವಿಲ್ಲದಲ್ಲಿ ಅಲ್ಲಿಯೇ ಒಂದು ವರ್ಷ ಮುಂದುವರೆಸಿರಿ. ಹೆಚ್ಚಿನ ಬಡ್ಡಿ, ಉಡುಗೊರೆ, ಕಮಿಷನ್ ಆಸೆಯಿಂದ ಅಭದ್ರವಾದ ಅಥವಾ ಊಹಾಪೋಹ (Speculation) ಹೂಡಿಕೆಯಲ್ಲಿ ತೊಡಗಿಸಬೇಡಿ.

-ಹೆಸರು, ಊರು ಬೇಡ

ನಾನು ವಿವಾಹಿತೆ. ನನ್ನ ಬಳಿ ₹ 25,000 ಹಣವಿದೆ. ನನಗೆ ಉದ್ಯೋಗ ಮಾಡಲು ಅಥವಾ ಠೇವಣಿ ಇರಿಸಲು ಸಲಹೆ ನೀಡಿ.

ಉತ್ತರ: ನೀವು ಮುದ್ರಾ ಯೋಜನೆಯ ಪ್ರಯೋಜನ ಪಡೆದು, ಯಾವುದಾದರೂ ಒಂದು ಸಣ್ಣ ಉದ್ಯೋಗ ಮಾಡಿ. ಉದಾ: ತರಕಾರಿ ವ್ಯವಹಾರ, ಹಣ್ಣಿನ ಅಂಗಡಿ, ಐಸ್‌ಕ್ರೀಮ್ ಮಾರಾಟ, ಜೆರಾಕ್ಸ್‌, ಹೀಗೆ ಯಾವುದಾದರೊಂದು ವ್ಯಾಪಾರ ಮಾಡಿ. ಮುದ್ರಾ ಯೋಜನೆಯಲ್ಲಿ ‘ಶಿಶು’ ಅಡಿಯಲ್ಲಿ ಗರಿಷ್ಠ ₹ 50 ಸಾವಿರದವರೆಗೆ ಸಾಲ ಸಿಗುತ್ತದೆ. ಅಲ್ಲಿಯವರೆಗೆ ಸಾಲ ಪಡೆಯಲು ಬಯಸುವ ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ ₹ 25 ಸಾವಿರ ಇಡಿ. ಮುದ್ರಾ ಯೋಜನೆಯಲ್ಲಿ ‘ಶಿಶು’ ಸಾಲ ₹ 50 ಸಾವಿರ ಪಡೆಯಲು ಜಾಮೀನು, ಆಧಾರ ಮಾರ್ಜಿನ್‌ ಹಣ ಯಾವುದೂ ಅವಶ್ಯವಿಲ್ಲ.

- ಬಿ.ವಿ.ಎ. ಕುಮಾರ, ಬೆಳಗಾವಿ

GPF-PPF ವ್ಯತ್ಯಾಸವೇನು? ಯಾರು ಯಾವುದನ್ನು ಮಾಡಿಸಬೇಕು. ಯಾವುದು ಹೆಚ್ಚು ಲಾಭಕರ?

ಉತ್ತರ: ಸರ್ಕಾರಿ ನೌಕರರು Government Provident Fund ನಲ್ಲಿ ಹಣ ಹೂಡಬಹುದು. PPF ದೇಶದ ಎಲ್ಲಾ ಪ್ರಜೆಗಳೂ ಮಾಡಿಸಬಹುದು. GPF ನೌಕರಿಯ ಅಂತ್ಯಕ್ಕೆ ಹಾಗೂ PPF 15 ವರ್ಷದ ಅಂತ್ಯಕ್ಕೆ ಹಣ ಪಡೆಯಬಹುದು. ಈ ಎರಡೂ ಖಾತೆಯ ಬಡ್ಡಿಗೆ ತೆರಿಗೆ ವಿನಾಯ್ತಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.