ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು (ಕೆಎಂಎಫ್) ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಗೆ ಮುಂದಾಗಿದೆ.
ಪ್ರತಿ ಕ್ವಿಂಟಲ್‌ಗೆ ₹2,400 ದರದಲ್ಲಿ (ಸರ್ಕಾರ ನಿಗದಿಪಡಿಸಿರುವ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ಬೆಂಬಲ ಬೆಲೆ ₹2,225, ಎರಡು ಗೋಣಿ ಚೀಲದ ಮೊತ್ತ ಮತ್ತು ಸಾಗಣೆ ವೆಚ್ಚ ₹175) ಖರೀದಿಸಲಿದೆ.
ಈ ಸಂಬಂಧ ನೋಡಲ್ ಅಧಿಕಾರಿಗಳು, ಸಂಚಾಲಕರು ಹಾಗೂ ಸಿಬ್ಬಂದಿಯನ್ನು ನೇಮಿಸಲಾಗಿದೆ. ನೋಡಲ್ ಅಧಿಕಾರಿಗಳು ಎಪಿಎಂಸಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕು ಎಂದು ಕೆಎಂಎಫ್ ನಿರ್ದೇಶನ ನೀಡಿದೆ.
ಮಹಾಮಂಡಳಿಯ ವ್ಯಾಪ್ತಿಗೆ ಬರುವ ಐದು ಪಶು ಆಹಾರ ಘಟಕಗಳ ಸಾಮರ್ಥ್ಯ ಮತ್ತು ಅವಶ್ಯಕತೆಗೆ ಅನುಗುಣವಾಗಿ ರೈತರಿಂದ ಮೆಕ್ಕೆಜೋಳ ಖರೀದಿಸಲಾಗುವುದು. ಒಟ್ಟು 12 ಖರೀದಿ ಕೇಂದ್ರ ತೆರೆಯಲಾಗುತ್ತಿದ್ದು, ನವೆಂಬರ್ 14ರೊಳಗೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.
ರೈತರು ಕೇಂದ್ರಗಳಿಗೆ ಎಫ್‌ಎಕ್ಯೂ ಗುಣಮಟ್ಟದ ಮೆಕ್ಕೆಜೋಳ ಪೂರೈಸಬೇಕು. ಮೆಕ್ಕೆಜೋಳ ಖರೀದಿಸಿದ ದಿನದಿಂದ ಗರಿಷ್ಠ 20 ದಿನದೊಳಗೆ ಸರ್ಕಾರದ ಡಿಬಿಟಿ ಪೋರ್ಟಲ್ ಮೂಲಕ ರೈತರ ಖಾತೆಗಳಿಗೆ ಹಣ ಜಮೆ ಮಾಡಲಾಗುತ್ತದೆ ಎಂದು ಹೇಳಿದೆ.
ರೈತರಿಗೆ ಫ್ರೂಟ್ಸ್ ಸಂಖ್ಯೆಯೊಂದಿಗೆ ಕ್ಷೀರಸಿರಿ ತಂತ್ರಾಂಶದಲ್ಲಿ ಮೆಕ್ಕೆಜೋಳ ಪೂರೈಕೆ ಮಾಡುವುದಕ್ಕೆ ಅನುಗುಣವಾಗಿ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ಯಾವ ದಿನದಂದು ಮೆಕ್ಕೆಜೋಳ ತರಬೇಕು ಎಂಬ ಬಗ್ಗೆ ಕೇಂದ್ರದ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದೆ.
ಖರೀದಿ ಕೇಂದ್ರದಲ್ಲಿ ಎದುರಾಗುವ ತಾಂತ್ರಿಕ ಸಮಸ್ಯೆ ಬಗೆಹರಿಸಲು ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದೆ.
ಎಲ್ಲೆಲ್ಲಿ ಖರೀದಿ?
ಎಚ್.ಡಿ. ಕೋಟೆ, ದಾವಣಗೆರೆ, ಹಾವೇರಿ, ಚಿತ್ರದುರ್ಗ, ಹಗರಿಬೊಮ್ಮನಹಳ್ಳಿ, ಪಿರಿಯಾಪಟ್ಟಣ, ಗೌರಿಬಿದನೂರು, ಶಿಗ್ಗಾವಿ, ಹೊನ್ನಾಳಿ, ಗದಗ, ಹಿರೇಕೆರೂರು ಮತ್ತು ರಾಣೆಬೆನ್ನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.