ಪುಣೆ: ‘ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಯಡಿ ತರಲು ನಾನು ಉತ್ಸುಕನಾಗಿದ್ದೇನೆ. ಆದರೆ, ರಾಜ್ಯಗಳು ಇದಕ್ಕೆ ಸರ್ವಾನುಮತದಿಂದ ಬೆಂಬಲ ನೀಡಬೇಕಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಪುಣೆ ಇಂಟರ್‌ನ್ಯಾಷನಲ್ ಸೆಂಟರ್‌ನಿಂದ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ನಾನು ಹಲವು ದಿನಗಳಿಂದ ಸಲಹೆ ನೀಡುತ್ತಿದ್ದೇನೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಹಲವು ಸಂದರ್ಭಗಳಲ್ಲಿ ಈ ಮಾತನ್ನು ಪುನರುಚ್ಚರಿದ್ದಾರೆ’ ಎಂದರು.
ಕೇರಳದ ಹೈಕೋರ್ಟ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ಅಡಿ ತರುವ ಬಗ್ಗೆ ಸರಕು ಮತ್ತು ಸೇವಾ ತೆರಿಗೆ ಮಂಡಳಿಯು ತನ್ನ ಕಾರ್ಯಸೂಚಿಯಲ್ಲಿ ಪ್ರಸ್ತಾಪಿಸಿ ಚರ್ಚಿಸುವಂತೆ ಸಲಹೆ ನೀಡಿದೆ.
‘ಅಲಹಾಬಾದ್‌ನಲ್ಲಿ ನಡೆದ ಮಂಡಳಿಯ ಸಭೆಯಲ್ಲಿ ಈ ವಿಷಯವು ಚರ್ಚೆಗೆ ಬಂದಿತ್ತು. ಆದರೆ, ಮಂಡಳಿಯು ರಾಜ್ಯಗಳ ಒಮ್ಮತ ನಿರ್ಧಾರದ ಮೇಲೆ ಕೆಲಸ ನಿರ್ವಹಿಸಲಿದೆ. ಇದಕ್ಕೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಬೇಕಿದೆ’ ಸಚಿವರು ತಿಳಿಸಿದರು.
‘ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ದರವನ್ನು ಇಳಿಕೆ ಮಾಡಲಾಗಿದೆ. ಆದರೆ, ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳು ಹೆಚ್ಚುವರಿ ವ್ಯಾಟ್ ದರವನ್ನು ಕೈಬಿಡಲು ಸಿದ್ಧವಿಲ್ಲ. ಇದು ಕಾರ್ಯಗತವಾಗುವ ಸಾಧ್ಯತೆ ಕಡಿಮೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.