ನವದೆಹಲಿ: ಚಿಪ್ ವಿನ್ಯಾಸಕ ಕಂಪನಿ ಕ್ವಾಲ್‌ಕಾಮ್ ಚೆನ್ನೈನಲ್ಲಿ ಹೊಸ ವಿನ್ಯಾಸ ಕೇಂದ್ರವನ್ನು ವಿಸ್ತರಣೆ ಮಾಡುವುದಾಗಿ ಭಾನುವಾರ ಘೋಷಿಸಿದೆ. ಇದು ₹177.27 ಕೋಟಿ ಪ್ರಸ್ತಾವಿತ ಹೂಡಿಕೆಯಾಗಿದೆ. 1,600 ನುರಿತ ವೃತ್ತಿಪರರಿಗೆ ಉದ್ಯೋಗ ಸಿಗಲಿದೆ ಎಂದು ಚೆನ್ನೈನಲ್ಲಿ ನಡೆದ ತಮಿಳುನಾಡು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕಂಪನಿಯು ತಿಳಿಸಿದೆ.
ನಿಸ್ತಂತು ಸಂಪರ್ಕದಲ್ಲಿ ಹೊಸ ಕೇಂದ್ರವು ಪರಿಣತಿಯನ್ನು ಹೊಂದಲಿದೆ. ವೈ-ಫೈ ತಂತ್ರಜ್ಞಾನಗಳಿಗೆ ಪೂರಕವಾದ ಸಂಶೋಧನೆಗಳ ಮೇಲೆ ಈ ಕೇಂದ್ರವು ಗಮನ ಹರಿಸಲಿದೆ. ಇದು 5ಜಿ ಸೆಲ್ಯುಲಾರ್ ತಂತ್ರಜ್ಞಾನದಲ್ಲಿ ಕ್ವಾಲ್‌ಕಾಮ್‌ನ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳಿಗೆ ಸಕ್ರಿಯ ಕೊಡುಗೆ ನೀಡಲಿದೆ. ವೈರ್‌ಲೆಸ್ ಸಂವಹನ ಉದ್ಯಮದಲ್ಲಿ ಮುಂಚೂಣಿಯಲ್ಲಿರಲು ಕಂಪನಿಯ ಬದ್ಧತೆಯನ್ನು ಹೊಂದಿದೆ ಎಂದು ತಿಳಿಸಿದೆ.
ಹೊಸ ವಿನ್ಯಾಸ ಕೇಂದ್ರವು ಚೆನ್ನೈನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಕಂಪನಿ ಹೇಳಿದೆ.
‘ಭಾರತದಲ್ಲಿ ತಯಾರಿಸಿ ಮತ್ತು ಭಾರತದಲ್ಲಿ ವಿನ್ಯಾಸಗೊಳಿಸಿ ಎಂಬ ಕ್ವಾಲ್‌ಕಾಮ್‌ನ ಬದ್ಧತೆಗೆ ಈ ಹೊಸ ಕೇಂದ್ರವು ಬೆಂಬಲ ನೀಡಲಿದೆ. ಭಾರತದ ತಂತ್ರಜ್ಞಾನ ಪಾಲುದಾರರೊಂದಿಗಿನ ನಮ್ಮ ಸಹಭಾಗಿತ್ವವನ್ನು ಇದು ಇನ್ನಷ್ಟು ವಿಸ್ತರಿಸಲಿದೆ. ಹೊಸ ತಂತ್ರಜ್ಞಾನ ಅಳವಡಿಕೆಗೆ ವೇಗ ತುಂಬಲಿದೆ’ ಎಂದು ಸೊಯಿನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.