ADVERTISEMENT

ಸದ್ಯಕ್ಕೆ ರೆಪೊ ದರ ಕಡಿತವಿಲ್ಲ: ಶಕ್ತಿಕಾಂತ ದಾಸ್‌

ಪಿಟಿಐ
Published 11 ಜುಲೈ 2024, 15:34 IST
Last Updated 11 ಜುಲೈ 2024, 15:34 IST
ಶಕ್ತಿಕಾಂತ ದಾಸ್‌
ಶಕ್ತಿಕಾಂತ ದಾಸ್‌   

ನವದೆಹಲಿ: ‘ಚಿಲ್ಲರೆ ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಳ್ಳುವುದು ಆರ್‌ಬಿಐನ ಗುರಿಯಾಗಿದೆ. ಹಣದುಬ್ಬರದ ಈಗಿನ ಸ್ಥಿತಿಯನ್ನು ಅವಲೋಕಿಸಿದರೆ ರೆಪೊ ದರ ಕಡಿತದ ಬಗ್ಗೆ ನಿರ್ಧಾರ ಕೈಗೊಳ್ಳುವುದು ಅಪಕ್ವ ಎನಿಸುತ್ತದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.  

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರವು ನಿಗದಿತ ಪಥದತ್ತ ಸಾ‌ಗಬೇಕಿದೆ. ಆಗಷ್ಟೇ ರೆಪೊ ದರ ಕಡಿತಗೊಳಿಸುವ ಬಗ್ಗೆ ನಮಗೆ ವಿಶ್ವಾಸ ಮೂಡುತ್ತದೆ ಎಂದು ಸಿಎನ್‌ಬಿಸಿ–ಟಿ.ವಿ 18ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

‘ಹಣದುಬ್ಬರವನ್ನು ನಿಯಂತ್ರಿಸುವ ಪ್ರಕ್ರಿಯೆ ಸಾಗಿದೆ. ಆದರೆ, ನಿಗದಿತ ಗುರಿಯಲ್ಲಿ ನಿಯಂತ್ರಿಸುವುದು ಕಷ್ಟಕರವಾಗಿದೆ’ ಎಂದಿದ್ದಾರೆ.

ADVERTISEMENT

ಹಣದುಬ್ಬರವು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 4.9, ಎರಡನೇ ತ್ರೈಮಾಸಿಕದಲ್ಲಿ ಶೇ 3.8, ಮೂರನೇ ತ್ರೈಮಾಸಿಕದಲ್ಲಿ ಶೇ 4.6ರಷ್ಟು ಹಾಗೂ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 4.5ರಷ್ಟು ದಾಖಲಾಗಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. 

ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಹಣದುಬ್ಬರವು ಇಳಿಕೆಯ ಪಥದಲ್ಲಿ ಸಾಗಿದೆ. ಆದರೆ, ಆಹಾರ ಪದಾರ್ಥಗಳ ಬೆಲೆ ಏರಿಕೆಯು ಹಣದುಬ್ಬರ ಇಳಿಕೆಗೆ ಸವಾಲಾಗಿದೆ. ಬೇಳೆ ಕಾಳು ಮತ್ತು ತರಕಾರಿಗಳ ಬೆಲೆಯು ಎರಡಂಕಿ ದಾಟಿದೆ.

‘2023–24ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯ ಸದೃಢವಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿಯೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ’ ಎಂದು ದಾಸ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.