ನವದೆಹಲಿ: ಬ್ಯಾಂಕಿಂಗ್ ಚಟುವಟಿಕೆಗಳಲ್ಲಿ ವಾಣಿಜ್ಯೋದ್ಯಮಿಗಳಿಗೆ ಮಿತಿ ವಿಧಿಸುವ ಸೂತ್ರವನ್ನೇ ಅನುಸರಿಸುವುದು ಮುಖ್ಯ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಮತ್ತು ಆರ್‌ಬಿಐ ಮಾಜಿ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅವರು ಪ್ರತಿಪಾದಿಸಿದ್ದಾರೆ.
ಈಗ ಸಿದ್ಧಪಡಿಸಿರುವ ಪ್ರಸ್ತಾವನೆಯನ್ನು ಪ್ರಸ್ತಾವನೆಯ ರೂಪದಲ್ಲೇ ಉಳಿಸಿಕೊಳ್ಳುವುದು ಒಳಿತು ಎಂದು ಅವರು ಜಂಟಿಯಾಗಿ ಬರೆದಿರುವ ಲೇಖನವೊಂದರಲ್ಲಿ ಹೇಳಿದ್ದಾರೆ. ‘ಸಾಲಗಾರನೇ ಬ್ಯಾಂಕ್‌ನ ಮಾಲೀಕನೂ ಆದಾಗ, ಒಳ್ಳೆಯ ರೀತಿಯಲ್ಲಿ ಸಾಲ ಕೊಡುವುದು ಹೇಗೆ ಸಾಧ್ಯ’ ಎಂದು ಲೇಖನದಲ್ಲಿ ಪ್ರಶ್ನಿಸಲಾಗಿದೆ.
ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕ್ ನಡೆಸಲು ಅವಕಾಶ ನೀಡುವ ಪ್ರಸ್ತಾವನೆಯು ಸ್ಫೋಟಿಸಲು ಸಿದ್ಧವಾಗಿರುವ ಬಾಂಬ್ ಇದ್ದಂತಿದೆ ಎಂದು ಅವರು ಹೇಳಿದ್ದಾರೆ. ‘ಈಗಲೇ ಈ ಪ್ರಸ್ತಾವ ಏಕೆ ಬಂತು’ ಎಂದೂ ಲೇಖನದಲ್ಲಿ ಪ್ರಶ್ನಿಸಲಾಗಿದೆ. ಲೇಖನವನ್ನು ರಾಜನ್ ಅವರ ಲಿಂಕ್ಡ್‌ಇನ್ ಪುಟದಲ್ಲಿ ಪ್ರಕಟಿಸಲಾಗಿದೆ.
ಉದ್ಯಮಗಳಿಗೆ ಬ್ಯಾಂಕ್ ನಡೆಸಲು ಅವಕಾಶ ಕಲ್ಪಿಸಿದರೆ, ಅವುಗಳಿಗೆ ಪ್ರಶ್ನೆಗಳನ್ನೇ ಕೇಳದೆ ಸಾಲ ವಿತರಣೆ ಆಗುತ್ತದೆ. ಕೆಲವು ಉದ್ದಿಮೆಗಳ ಕೈಯಲ್ಲಿ ಆರ್ಥಿಕ ಹಾಗೂ ರಾಜಕೀಯ ಶಕ್ತಿ ಕೇಂದ್ರೀಕೃತ ಆಗುವ ಪ್ರಕ್ರಿಯೆಗೆ ಇಂಬು ಕೊಟ್ಟಂತೆ ಆಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.