ADVERTISEMENT

ಆರ್‌ಬಿಐ ಸ್ವಾಯತ್ತೆ ಗೌರವಿಸದೇ ಇದ್ದರೆ ಅಪಾಯ ಕಟ್ಟಿಟ್ಟಬುತ್ತಿ: ರಘುರಾಂ ರಾಜನ್‌

‘ಆರ್‌ಬಿಐ ಸರ್ಕಾರದ ಸೀಟ್‌ಬೆಲ್ಟ್‌’

ಪಿಟಿಐ
Published 7 ನವೆಂಬರ್ 2018, 12:43 IST
Last Updated 7 ನವೆಂಬರ್ 2018, 12:43 IST
ರಘುರಾಂ ರಾಜನ್‌
ರಘುರಾಂ ರಾಜನ್‌    

ನವದೆಹಲಿ: ಕೇಂದ್ರ ಸರ್ಕಾರ ಕಾರ್‌ ಆದರೆ, ಆರ್‌ಬಿಐ ಅದರ ಸಿಟ್‌ ಬೆಲ್ಟ್‌. ಬೆಲ್ಟ್‌ ಧರಿಸದೇ ವಾಹನ ಚಲಾಯಿಸಿದರೆ ಅಪಾಯಕ್ಕೆ ಗುರಿಯಾಗುವ ಸಾಧ್ಯತೆಯೇ ಹೆಚ್ಚು.’ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಮಧ್ಯೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಆರ್‌ಬಿಐನ ಮಾಜಿ ಗವರ್ನರ್‌ ರಘುರಾಂ ರಾಜನ್‌ ಅವರು ಪ್ರತಿಕ್ರಿಯೆ ನೀಡಿರುವ ರೀತಿ ಇದು.

‘ಆರ್‌ಬಿಐ, ಸರ್ಕಾರದ ಸೀಟ್ ಬೆಲ್ಟ್‌ ಇದ್ದಂತೆ. ಬೆಲ್ಟ್‌ ಧರಿಸದೇ ವಾಹನ ಚಲಾಯಿಸಿದರೆ ಅಪಾಯ ಕಟ್ಟಿಟ್ಟಬುತ್ತಿ’ ಎಂದು ರಾಜನ್‌ ಎಚ್ಚರಿಕೆ ನೀಡಿದ್ದಾರೆ.

ಆರ್‌ಬಿಐ ಸ್ವಾಯತ್ತೆ ಗೌರವಿಸುವಂತೆ ಪ್ರತಿಪಾದಿಸಿರುವ ಅವರು, ‘ಕೇಂದ್ರ ಸರ್ಕಾರ ಆರ್‌ಬಿಐ ಅನ್ನು ಹತ್ತಿಕ್ಕಲು ಪ್ರಯತ್ನಿಸಿದರೆ, ಅದಕ್ಕೆ ಕಿವಿಗೊಡದೇ ಇರುವ ಸ್ವಾತಂತ್ರ್ಯವನ್ನು ಹೊಂದಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಮಧ್ಯೆ ಮೂಡಿರುವ ಬಿಕ್ಕಟ್ಟು ದಿನೇ ದಿನೇ ಹೆಚ್ಚುತ್ತಲೇ ಇದೆ. ಬ್ಯಾಂಕ್‌ಗಳಿಗೆ ವಿಧಿಸಿರುವ ನಿರ್ಬಂಧಿತ ಕ್ರಮಗಳ ಹೇರಿಕೆ (ಪಿಸಿಎ) ಮತ್ತು ನಗದು ಲಭ್ಯತೆ ನಿಯಮಗಳನ್ನು ಸಡಿಲಿಸುವಂತೆ ಕೇಂದ್ರ ಸರ್ಕಾರ ಆರ್‌ಬಿಐ ಮೇಲೆ ಒತ್ತಡ ತರುತ್ತಿದೆ. ಈ ಕುರಿತು ರಾಜನ್‌ ಸಿಎನ್‌ಬಿಸಿ ಟಿವಿ18ಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಸಂಸ್ಥೆಯ ಹಿತರಕ್ಷಣೆ ಆರ್‌ಬಿಐ ಆಡಳಿತ ಮಂಡಳಿಯ ಮೂಲ ಉದ್ದೇಶವಾಗಿದೆ. ಬೇರೆಯವರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುವುದಿಲ್ಲ ಎನ್ನುವುದನ್ನು ಅದು ಸ್ಪಷ್ಟಪಡಿಸಬೇಕಿದೆ.

‘ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಗಮನ ನೀಡುತ್ತದೆ. ಆರ್ಥಿಕ ಸ್ಥಿರತೆಯ ಆಧಾರದ ಮೇಲೆ ಆರ್‌ಬಿಐ ನಿಗದಿಪಡಿಸುವ ಇತಿಮಿತಿಗಳಡಿಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತದೆ. ಇದು ಆರ್‌ಬಿಐ ಮತ್ತು ಸರ್ಕಾರದ ಮಧ್ಯೆ ಇರುವ ಸಂಬಂಧ. ಹೀಗಾಗಿ ಆರ್‌ಬಿಐಯನ್ನು ಮೃದುವಾಗಿರುವಂತೆ ಕೇಂದ್ರ ಸರ್ಕಾರ ಒತ್ತಡ ತರುವ ಪ್ರಯತ್ನ ನಡೆಸುತ್ತದೆ’ ಎಂದು ಅವರು ವಿವರಿಸಿದ್ದಾರೆ.

‘ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವುದು ಆರ್‌ಬಿಐನ ಜವಾಬ್ದಾರಿಯಾಗಿದೆ. ಈ ಕಾರಣಕ್ಕಾಗಿಯೇ ಅದಕ್ಕೆ ಧಕ್ಕೆ ಒದಗುವ ಕ್ರಮಗಳು ಅಥವಾ ನಿರ್ಧಾರಗಳನ್ನು ತಿರಸ್ಕರಿಸುವ ಅಧಿಕಾರವನ್ನೂ ಆರ್‌ಬಿಐ ಹೊಂದಿದೆ’

‘ಆರ್‌ಬಿಐ ಮೇಲೆ ಒತ್ತಡ ತರುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಕೇಂದ್ರ ಸರ್ಕಾರದ ಮಾತಿಗೆ ಇಲ್ಲ ಎಂದು ಆರ್‌ಬಿಐ ಹೇಳುತ್ತಿರುವುದು ಇದೇನು ಹೊಸತಲ್ಲ. ಈ ಹಿಂದೆಯೂ ಇಲ್ಲ ಎಂದು ಹೇಳಿದೆ. ಆದರೆ ಸರ್ಕಾರ ಮನವಿ ಮಾಡಿಕೊಳ್ಳಬೇಕು. ತನ್ನ ನಿರ್ಧಾರದ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಆಗ ಒಂದು ಹಂತದಲ್ಲಿ ಆರ್‌ಬಿಐ ಒಪ್ಪಿಗೆ ನೀಡುವ ಸಾಧ್ಯತೆ ಇದೆ’ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಆರ್‌ಬಿಐ ಕಾಯ್ದೆಯ ಸೆಕ್ಷನ್‌ 7 ಬಳಸಿ ಒತ್ತಡ ಹೇರುವ ಕೇಂದ್ರದ ಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಎರಡು ಕಡೆಯವರು ತಮ್ಮ ಉದ್ದೇಶ ಮತ್ತು ಯೋಚನೆಗಳನ್ನು ಪರಸ್ಪರ ಗೌರವಿಸಿದರೆ ಒಳ್ಳೆಯದು ಎಂದಿದ್ದಾರೆ.

‘ಸೆಕ್ಷನ್‌ 7ರ ಪ್ರಕಾರ ಸರ್ಕಾರ ಹೇಳುವುದನ್ನು ಆರ್‌ಬಿಐ ಕೇಳಿಸಿಕೊಳ್ಳಲೇಬೇಕು. ಆದರೆ ಅಂತಿಮವಾಗಿ ದೇಶದ ಹಿತರಕ್ಷಣೆ ಮತ್ತು ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.