ADVERTISEMENT

ರತನ್‌ ಟಾಟಾ ಅಗಲಿಕೆ... ಸಂತನಂತೆ ಬದುಕಿದ ಉದ್ಯಮದ ದಿಗ್ಗಜ

ರಾಯಿಟರ್ಸ್
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
<div class="paragraphs"><p>ಬೆಂಗಳೂರಿನಲ್ಲಿ 2019ರಲ್ಲಿ ನಡೆದಿದ್ದ ‘ಏರೊ ಇಂಡಿಯಾ’ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ರತನ್‌ ಟಾಟಾ</p></div>

ಬೆಂಗಳೂರಿನಲ್ಲಿ 2019ರಲ್ಲಿ ನಡೆದಿದ್ದ ‘ಏರೊ ಇಂಡಿಯಾ’ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ರತನ್‌ ಟಾಟಾ

   

(ಪಿಟಿಐ ಸಂಗ್ರಹ ಚಿತ್ರ)

ನವದೆಹಲಿ: ಉಪ್ಪಿನಿಂದ ಉಕ್ಕಿನವರೆಗೆ, ಹೇರ್‌ಪಿನ್‌ನಿಂದ ಏರೋಪ್ಲೇನ್‌ವರೆಗೆ ಟಾಟಾ  ಮುಟ್ಟದೇ ಇರುವ ಕ್ಷೇತ್ರವಿಲ್ಲ. ಹಾಗೆಯೇ ತಾವು ಕೈಇಟ್ಟ ಕ್ಷೇತ್ರದಲ್ಲಿ ಕಾಪಾಡಿಕೊಂಡ ನೈತಿಕತೆ, ವಿಶ್ವಾಸಾರ್ಹತೆಯಿಂದಲೇ ‘ಟಾಟಾ’ ಬ್ರಾಂಡ್‌ ಆಗಿ ಟಾಟಾ ಸಮೂಹ ತನ್ನ ಛಾಪು ಮೂಡಿಸಿದೆ. 

ADVERTISEMENT

ರತನ್ ಟಾಟಾ ಅವರ ದೂರದೃಷ್ಟಿ ಮತ್ತು ಕನಸುಗಳಿಂದ ಟಾಟಾ ಸಮೂಹ ಬಹುರಾಷ್ಟ್ರೀಯ ಕಂಪನಿಯಾಗಿ ಜಾಗತಿಕ ಮಟ್ಟದಲ್ಲೂ ಸಾಮ್ರಾಜ್ಯ ವಿಸ್ತರಿಸಿದೆ.

1868 ಭಾರತವು ತನ್ನ ಆರ್ಥಿಕತೆಯನ್ನು ತೆರೆದ ವರ್ಷ. ಸಣ್ಣ ಜವಳಿ ಮತ್ತು ವ್ಯಾಪಾರ ಸಂಸ್ಥೆಯಾಗಿ ಪ್ರಾರಂಭವಾದ ಟಾಟಾ ಸಂಸ್ಥೆಯನ್ನು ಉಪ್ಪಿನಿಂದ ಉಕ್ಕಿನವರೆಗೆ, ಕಾರುಗಳಿಂದ ಸಾಫ್ಟ್‌ವೇರ್, ವಿದ್ಯುತ್‌ ಸ್ಥಾವರಗಳ ಕಾರ್ಯಾಚರಣೆ, ವಿಮಾನಯಾನ ಸೇವೆಯೊಂದಿಗೆ ಜಾಗತಿಕ ಶಕ್ತಿ ಕೇಂದ್ರವಾಗಿ ಪರಿವರ್ತಿಸಿತು.

ಇಂದು ಜಗತ್ತಿನ ದೊಡ್ಡ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಸನ್ಸ್‌ನ ಗೌರವಾನ್ವಿತ ಅಧ್ಯಕ್ಷರಾಗಿ ರತನ್ ಟಾಟಾ ಅವರು ಎರಡು ದಶಕ ಉದ್ಯಮ ಸಾಮ್ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ರತನ್‌ ಟಾಟಾ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ರತನ್ ಟಾಟಾ ಅವರು ತಮ್ಮ ಕುಟುಂಬ ಉದ್ಯಮ ಸಾರಥ್ಯವನ್ನು ವಹಿಸಿಕೊಳ್ಳುವುದಕ್ಕೂ ಮೊದಲು ನ್ಯೂಯಾರ್ಕ್‌ನ ಇಥಾಕಾದ ಕಾರ್ನೆಲ್ ವಿಶ್ವವಿದ್ಯಾನಿಲಯದಲ್ಲಿ 1962ರಲ್ಲಿ ವಾಸ್ತುಶಿಲ್ಪ ವಿಷಯದಲ್ಲಿ ಬಿ.ಎಸ್‌ ಪದವಿ ಪಡೆದರು. ಆರಂಭದ ದಿನಗಳಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡಿದ್ದರು. 1971ರಲ್ಲಿ ನ್ಯಾಷನಲ್ ರೇಡಿಯೊ ಮತ್ತು ಎಲೆಕ್ಟ್ರಾನಿಕ್ಸ್ ಸಂಸ್ಥೆಯ ನಿರ್ದೇಶಕರಾಗಿ ನೇಮಕಗೊಳ್ಳುವ ಮೊದಲು ಟಾಟಾ ಸಮೂಹದ ಹಲವಾರು ವ್ಯವಹಾರಗಳಲ್ಲಿ ಅನುಭವವನ್ನು ಪಡೆದುಕೊಂಡಿದ್ದರು.

ಟಾಟಾ ಸಮೂಹದ ಉಸ್ತುವಾರಿಯನ್ನು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ವಹಿಸಿದ್ದ ಅವರ ಚಿಕ್ಕಪ್ಪ ಜೆಆರ್‌ಡಿ ಟಾಟಾ ಅವರಿಂದ ರತನ್‌ ಟಾಟಾ ಅವರು ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ 1991ರಲ್ಲಿ ಅಧಿಕಾರ ವಹಿಸಿಕೊಂಡರು. ಒಂದು ದಶಕದ ನಂತರ ಟಾಟಾ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿ ಚುಕ್ಕಾಣಿ ವಹಿಸಿಕೊಂಡರು. 

ಅಂದಾಜು ನೂರು ವರ್ಷಗಳ ಹಿಂದೆ ತಮ್ಮ ಮುತ್ತಜ್ಜ ಸ್ಥಾಪಿಸಿದ್ದ ಈ ಸಮೂಹವನ್ನು 2012ರವರೆಗೆ ಅಧ್ಯಕ್ಷರಾಗಿ ಮುನ್ನಡೆಸಿದರು. 1996ರಲ್ಲಿ ದೂರಸಂಪರ್ಕ ಕಂಪನಿ ಟಾಟಾ ಟೆಲಿಸರ್ವಿಸಸ್ ಅನ್ನು ಸ್ಥಾಪನೆ ಮಾಡಿದರು. ಜತೆಗೆ 2004ರಲ್ಲಿ ಐ.ಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕೂಡಾ ಆರಂಭಿಸಿದರು.

ಟಾಟಾ ಸನ್ಸ್ ವೆಬ್‌ಸೈಟ್‌ನಲ್ಲಿನ ಅವರ ವ್ಯಕ್ತಿ ಚಿತ್ರಣದ ಪ್ರಕಾರ, ಮಿತ್ಸುಬಿಷಿ ಕಾರ್ಪೊರೇಷನ್ ಮತ್ತು ಜೆಪಿ ಮೋರ್ಗಾನ್ ಚೇಸ್‌ನ ಅಂತರರಾಷ್ಟ್ರೀಯ ಸಲಹಾ ಮಂಡಳಿಗಳಲ್ಲಿ ಟಾಟಾ ಅವರು ಸೇವೆ ಸಲ್ಲಿಸಿದ್ದಾರೆ.

ಟಾಟಾ ಸಮೂಹದಿಂದ ಜನೋಪಕಾರಿ ಕೆಲಸಗಳಿಗಾಗಿ ಟಾಟಾ ಟ್ರಸ್ಟ್‌ ಕೂಡ ನಡೆಸುತ್ತಿದ್ದು, ಇದರ ಚಟುವಟಿಕೆಗಳಲ್ಲಿ ರತನ್‌ ಟಾಟಾ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಸಂತನಂತೆ ಬದುಕಿದ ಉದ್ಯಮದ ದಿಗ್ಗಜ: ವಿಶ್ವದ ಅತ್ಯಂತ ಪ್ರಭಾವಿ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದರೂ ರತನ್‌ ಟಾಟಾ ಅವರು ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ಪೈಪೋಟಿ ನಡೆಸಲಿಲ್ಲ. 100ಕ್ಕೂ ಹೆಚ್ಚು ದೇಶಗಳಲ್ಲಿ 30 ಕಂಪನಿಗಳನ್ನು ನಿಭಾಯಿಸುತ್ತಿದ್ದರು. ಆಡಂಬರವಿಲ್ಲದ, ಸಂತನಂತಹ ಬದುಕು ನಡೆಸಿದರು.

ಲಕ್ಷ ರೂಪಾಯಿಗೆ ಕಾರು ನೀಡಿ ಕ್ರಾಂತಿ ಮಾಡಿದ್ದ ಟಾಟಾ 

‘ಒಂದು ಲಕ್ಷ ರೂಪಾಯಿ ಬೆಲೆಯ ಕಾರನ್ನು ಮಾರುಕಟ್ಟೆಗೆ ತರುತ್ತೇವೆ. ಸ್ಕೂಟರ್‌ನಲ್ಲಿ ಇಬ್ಬರು–ಮೂವರು ಕುಳಿತು ಹರಸಾಹಸ ಪಡುವ ಭಾರತದ ಪ್ರತಿ ಕುಟುಂಬ ಕೈಗೆಟುಕುವ ಬೆಲೆಯ ಕಾರಿನಲ್ಲಿ ಪ್ರಯಾಣಿಸಬೇಕು’ ಎಂದು ರತನ್ ಟಾಟಾ 2003ರಲ್ಲಿ ಘೋಷಿಸಿದ್ದರು.

ಇಡೀ ಕಾರು ತಯಾರಿಕಾ ಉದ್ಯಮ ಜತೆಗೆ ಜನಸಾಮಾನ್ಯರೂ ರತನ್ ಟಾಟಾ ಅವರ ಮಾತನ್ನು ಒಮ್ಮೆಗೆ ನಂಬಿರಲಿಲ್ಲ. ಆಗಿನ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಒಂದು ಆಟೊ ಬೆಲೆಯೇ ಒಂದು ಲಕ್ಷದ ಮೇಲಿತ್ತು. ಕೆಲವು ಸ್ಪೋರ್ಟ್ಸ್‌ಬೈಕ್‌ಗಳ ಮಾರಾಟದ ಬೆಲೆ ಒಂದು ಲಕ್ಷದ ಆಸುಪಾಸಿನಲ್ಲಿತ್ತು. ‘ಒಂದು ಲಕ್ಷಕ್ಕೆ ಪ್ಲಾಸ್ಟಿಕ್‌ ಕಾರು ನೀಡಬಹುದಷ್ಟೆ’. ‘ಪ್ಲಾಸ್ಟಿಕ್‌ ಕಾರಿಗೆ ಎಂಜಿನ್‌ ಬದಲು ಸೈಕಲ್‌ ಪೆಡಲ್ ಅಳವಡಿಸಿ ನೀಡಬಹುದು’ ಎಂಬ ಅಭಿಪ್ರಾಯಗಳು ಕೇಳಿಬಂದಿದ್ದವು.

ಏಕೆಂದರೆ ಆಗ ಭಾರತದ ಮಾರುಕಟ್ಟೆಯಲ್ಲಿ ಇದ್ದ ಅತ್ಯಂತ ಅಗ್ಗದ ಕಾರಿನ ಎಕ್ಸ್‌ಷೋರೂಂ ಬೆಲೆ ₹1.99 ಲಕ್ಷದಷ್ಟಿತ್ತು. ಅಂತಹ ಸನ್ನಿವೇಶದಲ್ಲಿ ತಾವು ನುಡಿದಂತೆಯೇ ಒಂದು ಲಕ್ಷ ಬೆಲೆಗೆ ಟಾಟಾ ನ್ಯಾನೊ ಕಾರನ್ನು ಅವರು ದೇಶದ ಜನರಿಗೆ ನೀಡಿ ಅಚ್ಚರಿ ಮೂಡಿಸಿದ್ದರು. ನ್ಯಾನೊ ಕಾರು ಈಗಲೂ ಭಾರತದ ರಸ್ತೆಗಳಲ್ಲಿ ಓಡಾಡುತ್ತಿವೆ.

ರತನ್ ಟಾಟಾ ಅವರು ದೂರದೃಷ್ಟಿಯ ನಾಯಕ, ಸಹಾನುಭೂತಿಯ ಆತ್ಮ ಮತ್ತು ಅಸಾಧಾರಣ ಮನುಷ್ಯ. ಭಾರತದ ಅತ್ಯಂತ ಪ್ರತಿಷ್ಠಿತ ಉದ್ಯಮ ಸಂಸ್ಥೆಗಳಿಗೆ ಸ್ಥಿರ ನಾಯಕತ್ವ ಒದಗಿಸಿದ್ದರು
–ನರೇಂದ್ರ ಮೋದಿ, ಪ್ರಧಾನಿ
ದೇಶವು ತನ್ನ ಅತ್ಯಂತ ಶ್ರೇಷ್ಠ ಮತ್ತು ಸಹೃದಯ ಪುತ್ರರಲ್ಲಿ ಒಬ್ಬನನ್ನು ಕಳೆದುಕೊಂಡಿದೆ.
–ಮುಖೇಶ್ ಅಂಬಾನಿ, ಉದ್ಯಮಿ
ಆಧುನಿಕ ಭಾರತದ ಹಾದಿಯನ್ನು ಮರು ವ್ಯಾಖ್ಯಾನಿಸಿದ ಒಬ್ಬ ದಾರ್ಶನಿಕ ಮತ್ತು ಒಬ್ಬ ದೈತ್ಯನನ್ನು ದೇಶವು ಕಳೆದುಕೊಂಡಿದೆ
–ಗೌತಮ್ ಅದಾನಿ, ಉದ್ಯಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.