ಮುಂಬೈ: ಗ್ರಾಮೀಣ ಮತ್ತು ಅರೆ ಪಟ್ಟಣ ಪ್ರದೇಶಗಳಲ್ಲಿ ಡಿಜಿಟಲ್ ವಹಿವಾಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಇಂಟರ್ನೆಟ್ ಸೇವೆ ಇಲ್ಲದಿದ್ದರೂ ಡಿಜಿಟಲ್ ಪಾವತಿಯನ್ನು ಸಾಧ್ಯವಾಗಿಸಲು ಅಗತ್ಯವಿರುವ ನಿಯಮಗಳ ಚೌಕಟ್ಟನ್ನು ಸೋಮವಾರ ಪ್ರಕಟಿಸಿದೆ.
ಇಂಟರ್ನೆಟ್ ಲಭ್ಯತೆ ಇಲ್ಲದ ಕಡೆಗಳಲ್ಲಿ, ಪ್ರತಿ ವಹಿವಾಟಿನಲ್ಲಿ ಗರಿಷ್ಠ ₹ 200ರವರೆಗೆ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಣ ಪಾವತಿಸುವ ವ್ಯಕ್ತಿ ಹಾಗೂ ಆ ಮೊತ್ತವನ್ನು ಸ್ವೀಕರಿಸುವ ವ್ಯಕ್ತಿಗೆ ಒಂದೇ ಕಡೆ ಇದ್ದಾಗ ಮಾತ್ರ ಈ ಬಗೆಯ ಪಾವತಿ ಸಾಧ್ಯವಾಗಲಿದೆ. ಕಾರ್ಡ್, ವಾಲೆಟ್ ಮತ್ತು ಮೊಬೈಲ್ ಸಾಧನ ಬಳಸಿ ಹಣ ಪಾವತಿಸಲು ಅವಕಾಶ ಇದೆ.
ಯುಪಿಐ ಪಾವತಿ ಅಥವಾ ಇಂಟರ್ನೆಟ್ ಬ್ಯಾಂಕಿಂಗ್‌ನಲ್ಲಿ ಇರುವಂತೆ ಪಾಸ್‌ವರ್ಡ್ ಬಳಸಿ ಪಾವತಿಗೆ ಅನುಮೋದನೆ ನೀಡುವ ಅಗತ್ಯ ಆಫ್‌ಲೈನ್ ಡಿಜಿಟಲ್ ಪಾವತಿಯಲ್ಲಿ ಇರುವುದಿಲ್ಲ. ಇಂಟರ್ನೆಟ್ ಸೌಲಭ್ಯ ಇಲ್ಲದೆಯೂ (ಆಫ್‌ಲೈನ್) ಈ ಬಗೆಯ ಪಾವತಿ ನಡೆಯುವ ಕಾರಣ, ಹಣ ಕಡಿತವಾಗಿರುವ ಅಥವಾ ಜಮಾ ಆಗಿರುವ ಕುರಿತು ಎಸ್‌ಎಂಎಸ್ ಸಂದೇಶವು ತುಸು ವಿಳಂಬವಾಗಿ ಬರಲಿದೆ ಎಂದು ಆರ್‌ಬಿಐ ತಿಳಿಸಿದೆ.
ಇಂಟರ್ನೆಟ್ ಲಭ್ಯ ಇಲ್ಲದ ಪ್ರದೇಶಗಳಲ್ಲಿ ಆಫ್‌ಲೈನ್ ಮೂಲಕ ಪಾವತಿ ಸಾಧ್ಯವೇ ಎಂಬುದನ್ನು ಆರ್‌ಬಿಐ 2020ರ ಸೆಪ್ಟೆಂಬರ್‌ನಿಂದ 2021ರ ಜೂನ್ ನಡುವೆ ಪ್ರಾಯೋಗಿಕವಾಗಿ ಪರಿಶೀಲಿಸಿತ್ತು. ಈ ಪ್ರಕ್ರಿಯೆಯಲ್ಲಿ ಕಂಡುಕೊಂಡ ಅಂಶಗಳನ್ನು ಆಧರಿಸಿ, ನಿಯಮಗಳ ಚೌಕಟ್ಟನ್ನು ರೂಪಿಸಲಾಗಿದೆ.
‘ಇಂಟರ್ನೆಟ್ ಸಂಪರ್ಕ ದುರ್ಬಲವಾಗಿರುವ ಕಡೆಗಳಲ್ಲಿ ಈ ಬಗೆಯ ಪಾವತಿ ಸೌಲಭ್ಯವು ಡಿಜಿಟಲ್ ವಹಿವಾಟುಗಳಿಗೆ ಉತ್ತೇಜನ ನೀಡುವ ನಿರೀಕ್ಷೆ ಇದೆ’ ಎಂದು ಆರ್‌ಬಿಐ ಹೇಳಿದೆ. ಬಳಕೆದಾರರಿಂದ ಒಪ್ಪಿಗೆ ಪಡೆದ ನಂತರವೇ, ಆ ವ್ಯಕ್ತಿಗೆ ಆಫ್‌ಲೈನ್ ಪಾವತಿಗೆ ಅವಕಾಶ ಕಲ್ಪಿಸಬಹುದು. ಈ ಬಗೆಯ ಪಾವತಿಗಳಲ್ಲಿ ಅಡಚಣೆ ಉಂಟಾದರೆ ಗ್ರಾಹಕರಿಗೆ ಏಕೀಕೃತ ಒಂಬುಡ್ಸ್‌ಮನ್ ವ್ಯವಸ್ಥೆಯ ಮೊರೆ ಹೋಗಲು ಅವಕಾಶ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.