ಮುಂಬೈ (ಪಿಟಿಐ): ರಿಟೇಲ್ ಹಾಗೂ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಬ್ಯಾಂಕ್‌ಗಳು ವಿತರಿಸುವ ಸಾಲಗಳ ಮೇಲಿನ ಬಡ್ಡಿ ದರವು ರೆಪೊ ದರ ಆಧರಿಸಿರುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕಡ್ಡಾಯಗೊಳಿಸಿದೆ.
ರೆಪೊ ದರ ಕಡಿತದ ಪ್ರಯೋಜನವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ತ್ವರಿತವಾಗಿ ವರ್ಗಾಯಿಸುವಂತಾಗಲು ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ.
ವೈಯಕ್ತಿಕ, ರಿಟೇಲ್ ಮತ್ತು ಸಣ್ಣ ಕೈಗಾರಿಕಾ ಸಾಲಗಳ ಬಡ್ಡಿ ದರಗಳನ್ನು ರೆಪೊ ದರ ಆಧರಿಸಿರುವುದನ್ನು ಬ್ಯಾಂಕ್‌ಗಳು ಅಕ್ಟೋಬರ್ 1ರಿಂದ ಕಡ್ಡಾಯವಾಗಿ ಜಾರಿಗೆ ತರುವ ಸಂಬಂಧ ಕೇಂದ್ರೀಯ ಬ್ಯಾಂಕ್ ಬುಧವಾರ ಸುತ್ತೋಲೆ ಹೊರಡಿಸಿದೆ.
ಹೊಸದಾಗಿ ಮಂಜೂರು ಮಾಡುವ ವೈಯಕ್ತಿಕ ಅಥವಾ ರಿಟೇಲ್ ಮತ್ತು ‘ಎಂಎಸ್‌ಎಂಇ’ಗಳ ಬದಲಾಗುವ ಬಡ್ಡಿ ದರಗಳ ಸಾಲಗಳು ರೆಪೊ ದರಗಳನ್ನು ಆಧರಿಸಿರಬೇಕು ಎಂದು ಸೂಚಿಸಿದೆ.
ಬ್ಯಾಂಕ್‌ಗಳು ರೆಪೊ ದರ, ಟ್ರೆಷರಿ ಬಿಲ್ ಆದಾಯ ಮತ್ತು ಫೈನಾನ್ಶಿಯಲ್ ಬೆಂಚ್‌ಮಾರ್ಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಫ್‌ಬಿಐಎಲ್) ನಿಗದಿಪಡಿಸುವುದೂ ಸೇರಿದಂತೆ ವಿವಿಧ ಬಗೆಯ ಬಡ್ಡಿ ದರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ನಿರ್ದಿಷ್ಟ ಬಗೆಯ ಸಾಲಕ್ಕೆ ಸಂಬಂಧಿಸಿದಂತೆ ವಿಭಿನ್ನ ಬಗೆಯ ಬಡ್ಡಿ ದರ ನಿಗದಿಪಡಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಹಾಲಿ ಸಾಲಗಳು ಮತ್ತು ಸಾಲದ ಮಿತಿ ಆಧರಿಸಿದ ಎಂಸಿಎಲ್‌ಆರ್, ಮೂಲ ದರ ಹಾಗೂ ‘ಬಿಪಿಎಲ್‌ಆರ್’ಗಳು ಮರು ಪಾವತಿ ಅಥವಾ ಸಾಲ ನವೀಕರಣದವರೆಗೆ ಮುಂದುವರೆಯಲಿವೆ.
ಸದ್ಯಕ್ಕೆ ಜಾರಿಯಲ್ಲಿ ಇರುವ, ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್) ಬಡ್ಡಿ ದರವು ಹಲವಾರು ಕಾರಣಗಳಿಂದ ತೃಪ್ತಿದಾಯಕವಾಗಿಲ್ಲ. ಈ ರೀತಿ ರೆಪೊ ದರ ಆಧರಿಸಿದ ಬಡ್ಡಿದರಗಳು ಮೂರು ತಿಂಗಳಿನಲ್ಲಿ ಕನಿಷ್ಠ ಒಂದು ಬಾರಿಯಾದರೂ ಪರಿಷ್ಕರಣೆ ಆಗಬೇಕು ಎಂದೂ ಎಂದೂ ಆರ್‌ಬಿಐ ಅಭಿಪ್ರಾಯಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.