ADVERTISEMENT

ಆ್ಯಪ್‌ ಮೂಲಕ ಸಾಲದ ಆಮಿಷ ಒಡ್ಡುವ ಜಾಲದ ಬಗ್ಗೆ ಆರ್‌ಬಿಐ ಎಚ್ಚರಿಕೆ

ಪಿಟಿಐ
Published 23 ಡಿಸೆಂಬರ್ 2020, 16:34 IST
Last Updated 23 ಡಿಸೆಂಬರ್ 2020, 16:34 IST
   

ಮುಂಬೈ: ಸಾಲ ನೀಡುವುದಾಗಿ ಆಮಿಷ ಒಡ್ಡುವ ಕೆಲವು ಅನಧಿಕೃತ ಮೊಬೈಲ್‌ ಆ್ಯಪ್‌ಗಳ ಜಾಲಕ್ಕೆ ಬಲಿಯಾಗಬಾರದು ಎಂದು ಆರ್‌ಬಿಐ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಸಾಲ ಕೊಡುವುದಾಗಿ ಹೇಳುವ ಇಂತಹ ಆ್ಯಪ್‌ಗಳ ಸಂಖ್ಯೆ ಹೆಚ್ಚುತ್ತಿದೆ ಎಂದೂ ಅದು ಹೇಳಿದೆ.

ಸಾಲವನ್ನು ತಕ್ಷಣಕ್ಕೆ, ಯಾವುದೇ ತೊಂದರೆಗಳು ಇಲ್ಲದೆ ನೀಡುವುದಾಗಿ ಹೇಳುವ ಇಂತಹ ಆ್ಯಪ್‌ಗಳ ಜಾಲದಲ್ಲಿ ಸಾರ್ವಜನಿಕರು ಹಾಗೂ ಕೆಲವು ಸಣ್ಣ ಉದ್ದಿಮೆಗಳು ಸಿಲುಕಿರುವ ವರದಿಗಳು ಇವೆ ಎಂದು ಕೂಡ ಆರ್‌ಬಿಐ ಪ್ರಕಟಣೆ ತಿಳಿಸಿದೆ.

ಇಂತಹ ಸಾಲಗಳಿಗೆ ತೆರಬೇಕಿರುವ ಬಡ್ಡಿ ಪ್ರಮಾಣ ವಿಪರೀತವಾಗಿ ಇರುತ್ತದೆ. ಹಲವು ಶುಲ್ಕಗಳನ್ನೂ ವಿಧಿಸಲಾಗುತ್ತದೆ. ಸಾಲ ವಸೂಲು ಮಾಡಲು ಇವು ಸ್ವೀಕಾರಾರ್ಹ ಅಲ್ಲದ ಮಾರ್ಗಗಳನ್ನು ಬಳಸುತ್ತವೆ. ಬಳಕೆದಾರರ ಮೊಬೈಲ್‌ ಫೋನ್‌ಗಳಲ್ಲಿ ಇರುವ ದತ್ತಾಂಶವನ್ನು ಅಕ್ರಮವಾಗಿ ಬಳಕೆ ಮಾಡಿಕೊಳ್ಳುತ್ತವೆ ಎಂಬ ವರದಿಗಳಿವೆ ಎಂದು ಪ್ರಕಟಣೆ ಹೇಳಿದೆ.

ADVERTISEMENT

ಆನ್‌ಲೈನ್‌ ಮೂಲಕ ಅಥವಾ ಮೊಬೈಲ್‌ ಆ್ಯಪ್‌ ಮೂಲಕ ಸಾಲ ನೀಡುವುದಾಗಿ ಹೇಳುವ ಕಂಪನಿಗಳ ಪೂರ್ವಾಪರಗಳನ್ನು ಗ್ರಾಹಕರು ಪರಿಶೀಲಿಸಬೇಕು ಎಂದೂ ಆರ್‌ಬಿಐ ಕಿವಿಮಾತು ಹೇಳಿದೆ.

ಆರ್‌ಬಿಐ ಕಿವಿಮಾತು

* ಕೆವೈಸಿ ದಾಖಲೆಗಳನ್ನು ಅಪರಿಚಿತ ವ್ಯಕ್ತಿಗಳ ಜೊತೆ ಅಥವಾ ಅನಧಿಕೃತ ಆ್ಯಪ್‌ಗಳ ಜೊತೆ ಹಂಚಿಕೊಳ್ಳಬಾರದು. ಇಂತಹ ಆ್ಯಪ್‌ಗಳ ಬಗ್ಗೆ ಕಾನೂನು ಸಂಸ್ಥೆಗಳಿಗೆ ಮಾಹಿತಿ ನೀಡಬಹುದು.

* https:achet.rbi.org.in ವೆಬ್‌ಸೈಟ್‌ಗೆ ಭೇಟಿ ನೀಡಿ ದೂರು ಸಲ್ಲಿಸಬಹುದು.

* ಬ್ಯಾಂಕುಗಳ ಹಾಗೂ ಎನ್‌ಬಿಎಫ್‌ಸಿಗಳ ಪರವಾಗಿ ಬಳಕೆಯಾಗುವ, ಸಾಲ ಕೊಡುವ ಆ್ಯಪ್‌ಗಳು ತಮ್ಮ ಬ್ಯಾಂಕ್‌ ಅಥವಾ ಎನ್‌ಬಿಎಫ್‌ಸಿ ಹೆಸರನ್ನು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು.

* ನೋಂದಾಯಿತ ಎನ್‌ಬಿಎಫ್‌ಸಿಗಳ ಹೆಸರುಗಳನ್ನು ಆರ್‌ಬಿಐ ವೆಬ್‌ಸೈಟ್‌ ಮೂಲಕ ತಿಳಿದುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.