ADVERTISEMENT

ಹಳೆ ಪಿಂಚಣಿ ವ್ಯವಸ್ಥೆಯಿಂದ ದೊಡ್ಡ ಸವಾಲು: ರಾಜ್ಯಗಳಿಗೆ ಆರ್‌ಬಿಐ ಕಿವಿಮಾತು

ಪಿಟಿಐ
Published 17 ಜನವರಿ 2023, 14:02 IST
Last Updated 17 ಜನವರಿ 2023, 14:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ (ಪಿಟಿಐ): ಕೆಲವು ರಾಜ್ಯ ಸರ್ಕಾರಗಳು ತಮ್ಮ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು (ಒಪಿಎಸ್‌) ಮತ್ತೆ ಜಾರಿಗೆ ತರುತ್ತಿರುವುದರ ಬಗ್ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಎಚ್ಚರಿಕೆಯ ಕಿವಿಮಾತು ಹೇಳಿದೆ. ಒಪಿಎಸ್‌ ಜಾರಿಗೆ ತರುತ್ತಿರುವುದು ‘ರಾಜ್ಯಗಳ ಆರ್ಥಿಕ ದಿಗಂತದಲ್ಲಿ’ ಬಹುದೊಡ್ಡ ಸವಾಲು ಹುಟ್ಟಿಸುತ್ತಿದೆ ಎಂದು ಆರ್‌ಬಿಐ ಹೇಳಿದೆ.

ಒಪಿಎಸ್‌ ಜಾರಿಗೆ ತರುವುದರಿಂದಾಗಿ ರಾಜ್ಯಗಳ ಪಾಲಿಗೆ ಮುಂದಿನ ವರ್ಷಗಳಲ್ಲಿ ಹಣಕಾಸಿನ ಮೂಲವೇ ಇಲ್ಲದ ಹೊಸ ವೆಚ್ಚವೊಂದು ಹುಟ್ಟಿಕೊಳ್ಳುತ್ತದೆ ಎಂದು ಆರ್‌ಬಿಐ ಎಚ್ಚರಿಸಿದೆ. ‘ರಾಜ್ಯಗಳ ಹಣಕಾಸು: 2022–23ರ ಬಜೆಟ್‌ಗಳ ಅಧ್ಯಯನ’ ಎಂಬ ವರದಿಯಲ್ಲಿ ಈ ಎಚ್ಚರಿಕೆ ಇದೆ. ಕಾಂಗ್ರೆಸ್ ಆಡಳಿತದ ಹಿಮಾಚಲ ಪ್ರದೇಶವು ಈಚೆಗೆ ತುಟ್ಟಿಭತ್ಯೆ ಆಧರಿಸಿದ ಒಪಿಎಸ್‌ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸುವುದಾಗಿ ಪ್ರಕಟಿಸಿದೆ.

ರಾಜಸ್ಥಾನ, ಛತ್ತೀಸಗಢ, ಜಾರ್ಖಂಡ್ ರಾಜ್ಯ ಸರ್ಕಾರಗಳು ಕೂಡ ತಮ್ಮ ನೌಕರರಿಗೆ ಒಪಿಎಸ್‌ ವ್ಯವಸ್ಥೆಯನ್ನು ಮತ್ತೆ ಆರಂಭಿಸುವುದಾಗಿ ಕೇಂದ್ರ ಸರ್ಕಾರ ಹಾಗೂ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಪಿಎಫ್‌ಆರ್‌ಡಿಎ) ಮಾಹಿತಿ ನೀಡಿವೆ. ಈಗ ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್‌ಪಿಎಸ್‌) ವ್ಯಾಪ್ತಿಯಲ್ಲಿರುವ ನೌಕರರಿಗೆ ಒಪಿಎಸ್‌ ಜಾರಿಗೊಳಿಸಲಾಗುವುದು ಎಂದು ಪಂಜಾಬ್ ಸರ್ಕಾರವು 2022ರ ನವೆಂಬರ್‌ 18ರಂದು ಅಧಿಸೂಚನೆ ಹೊರಡಿಸಿದೆ.

ADVERTISEMENT

‘ಹಲವು ರಾಜ್ಯಗಳು ಹಳೆಯ ಪಿಂಚಣಿ ವ್ಯವಸ್ಥೆಗೆ ಮರಳುವ ಸಾಧ್ಯತೆ ಇರುವುದು ದೊಡ್ಡ ಅಪಾಯವಾಗಿ ಕಾಣಿಸುತ್ತಿದೆ. ಒಪಿಎಸ್‌ ಜಾರಿಗೆ ತರುವುದರಿಂದ ವಾರ್ಷಿಕ ಬಜೆಟ್‌ನಲ್ಲಿ ಆಗುವ ಉಳಿತಾಯವು ಅಲ್ಪಕಾಲದ್ದು’ ಎಂದು ವರದಿಯಲ್ಲಿ ಹೇಳಲಾಗಿದೆ.

ಒಪಿಎಸ್‌ ಜಾರಿಗೊಳಿಸುತ್ತಿರುವುದರ ಬಗ್ಗೆ ಅರ್ಥಶಾಸ್ತ್ರಜ್ಞರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಯೋಜನಾ ಆಯೋಗದ ಉಪಾಧ್ಯಕ್ಷ ಆಗಿದ್ದ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು, ಒಪಿಎಸ್‌ ಜಾರಿಗೆ ತರುವುದು ಅತಿದೊಡ್ಡ ‘ಉಚಿತ ಕೊಡುಗೆ’ ಎಂದು ಈಚೆಗೆ ಹೇಳಿದ್ದಾರೆ.

2022–23ನೆಯ ಸಾಲಿಗೆ, ಅಭಿವೃದ್ಧಿ ಕಾರ್ಯಗಳಿಗೆ ಹೊರತಾದ ಪಿಂಚಣಿ, ಆಡಳಿತ ಸೇವೆಗಳ ವೆಚ್ಚಗಳಿಗೆ ಹೆಚ್ಚಿನ ಮೊತ್ತ ಮೀಸಲಿಟ್ಟಿರುವ ಕಾರಣ ರಾಜ್ಯಗಳ ವರಮಾನ ವೆಚ್ಚವು ಹೆಚ್ಚಾಗಿದೆ ಎಂದು ಆರ್‌ಬಿಐ ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.