ಮುಂಬೈ: ಆಧಾರರಹಿತವಾಗಿ ನೀಡುವ ಸಾಲದ ಪ್ರಮಾಣ ಏರಿಕೆ ಆಗುತ್ತಿರುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಆತಂಕ ವ್ಯಕ್ತಪಡಿಸಿದೆ. ಹಣಕಾಸು ಅಸ್ಥಿರತೆಗೆ ಇದು ಕಾರಣವಾಗಬಹುದು ಎಂದೂ ಹೇಳಿದೆ.
ಕಳೆದ ಎರಡು ವರ್ಷಗಳಲ್ಲಿ ಆಧಾರರಹಿತವಾಗಿ ರಿಟೇಲ್ ಸಾಲ ನೀಡಿಕೆಯು ಶೇ 23ರಷ್ಟು ಹೆಚ್ಚಳ ಕಂಡಿದೆ. ಆದರೆ, ಒಟ್ಟು ಸಾಲ ನೀಡಿಕೆಯಲ್ಲಿ ಶೇ 12–14ರವರೆಗೆ ಏರಿಕೆ ಆಗಿದೆ. ಹೀಗಾಗಿ ಈ ಬಗ್ಗೆ ಆರ್‌ಬಿಐ ಹೆಚ್ಚು ಗಮನ ಹರಿಸುವಂತೆ ಆಗಿದೆ ಎಂದು ಎಂದು ಆರ್‌ಬಿಐನ ಡೆಪ್ಯುಟಿ ಗವರ್ನರ್ ಜೆ. ಸ್ವಾಮಿನಾಥನ್ ತಿಳಿಸಿದ್ದಾರೆ.
ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಫಿನ್‌ಟೆಕ್‌ಗಳು ತಮ್ಮ ಆಂತರಿಕ ನಿಗಾ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಬೇಕು. ಈ ಬಗ್ಗೆ ಆರ್‌ಬಿಐ ಪರಿಶೀಲನೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.
ಕೆಲವು ವೈಯಕ್ತಿಕ ಸಾಲ ನೀಡಿಕೆಯಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡಿದೆ. ಇದನ್ನು ಬಹಳ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣಕಾಸು ನೀತಿ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯ ಹೇಳಿದ್ದಾರೆ. ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯದ ಬಗ್ಗೆ ಸಾಲದಾತರು ಬಹಳ ಎಚ್ಚರಿಕೆಯಿಂದ ಇರಬೇಕು. ಎಲ್ಲಿಂದ ಬಿಕ್ಕಟ್ಟು ಎದುರಾಗಬಹುದು ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಎಂದು ದಾಸ್ ಸಲಹೆ ನೀಡಿದ್ದಾರೆ.
ಕ್ರೆಡಿಟ್ ಕಾರ್ಡ್, ವೈಯಕ್ತಿಕ ಸಾಲ ಮತ್ತು ಮೈಕ್ರೊಫೈನಾನ್ಸ್ ಮೂಲಕ ಆಧಾರರಹಿತ ಸಾಲ ನೀಡಿಕೆಯಲ್ಲಿ ಭಾರಿ ಏರಿಕೆ ಕಂಡುಬರುತ್ತಿದೆ. ಹೀಗಾಗಿ ಯಾವುದೇ ರೀತಿಯಲ್ಲಿ ಆದರೂ ಅಪಾಯಗಳು ಎದುರಾಗಬಹುದೇ ಎಂದು ಹಣಕಾಸು ಸಂಸ್ಥೆಗಳು ಆರಂಭಿಕ ಹಂತದಲ್ಲಿಯೇ ಪರಿಶೀಲನೆ ನಡೆಸಬೇಕು ಎಂದು ಸ್ವಾಮಿನಾಥನ್ ತಿಳಿಸಿದ್ದಾರೆ.
ಸದ್ಯದ ಮಟ್ಟಿಗೆ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳ ಆರ್ಥಿಕ ಸ್ಥಿತಿಯು ಸ್ಥಿರವಾಗಿದೆ. ಜೂನ್ ತ್ರೈಮಾಸಿಕದಲ್ಲಿ ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣವು ಇಳಿಕೆ ಕಂಡಿದೆ ಎಂದು ದಾಸ್ ಹೇಳಿದ್ದಾರೆ.
ಆಂತರಿಕ ನಿಗಾ ವ್ಯವಸ್ಥೆ ಬಲಪಡಿಸಲು ಬ್ಯಾಂಕ್‌ಗಳಿಗೆ ಸೂಚನೆ ಸದ್ಯದ ಮಟ್ಟಿಗೆ ಬ್ಯಾಂಕಿಂಗ್ ವ್ಯವಸ್ಥೆ ಸ್ಥಿರ: ದಾಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.