ಮುಂಬೈ: ಪಂಜಾಬ್ ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ಗೆ (ಪಿಎಂಸಿ ಬ್ಯಾಂಕ್) ಹೊಸಜೀವ ನೀಡುವ ದಿಸೆಯಲ್ಲಿ ಮುಂದಡಿ ಇರಿಸಿರುವ ಆರ್‌ಬಿಐ, ಅದನ್ನು ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ (ಯುಎಸ್‌ಎಫ್‌ಬಿ) ಸ್ವಾಧೀನಕ್ಕೆ ತೆಗೆದುಕೊಳ್ಳಲು ಅಗತ್ಯವಿರುವ ಕರಡು ನಿಯಮಗಳನ್ನು ಸಿದ್ಧಪಡಿಸಿದೆ.
ಈ ಕರಡು ನಿಯಮಗಳ ಅನ್ವಯ, ಪಿಎಂಸಿ ಬ್ಯಾಂಕ್‌ನ ಆಸ್ತಿ ಹಾಗೂ ಹೊಣೆಗಾರಿಕೆಗಳನ್ನು ವಹಿಸಿಕೊಳ್ಳಲು ದೆಹಲಿ ಮೂಲದ ಯುಎಸ್‌ಎಫ್‌ಬಿಗೆ ಅವಕಾಶ ಸಿಗುತ್ತದೆ. ಪಿಎಂಸಿ ಬ್ಯಾಂಕ್‌ನಲ್ಲಿನ ಠೇವಣಿಗಳನ್ನೂ ಯುಎಸ್‌ಎಫ್‌ಬಿ ವಹಿಸಿಕೊಳ್ಳಲಿದೆ. ಇದರಿಂದಾಗಿ ಪಿಎಂಸಿ ಬ್ಯಾಂಕ್‌ನಲ್ಲಿ ಹಣ ಠೇವಣಿ ಇರಿಸಿದ್ದವರಿಗೆ ಹೆಚ್ಚಿನ ಮಟ್ಟದ ಸುರಕ್ಷತೆ ಲಭಿಸಲಿದೆ ಎಂದು ಆರ್‌ಬಿಐ ಹೇಳಿದೆ.
ಪಿಎಂಸಿ ಬ್ಯಾಂಕ್‌ನ ಸಣ್ಣ ಠೇವಣಿದಾರರಿಗೆ, ಆ ಬ್ಯಾಂಕ್‌ಯುಎಸ್‌ಎಫ್‌ಬಿ ತೆಕ್ಕೆಗೆ ಸೇರಿದ ನಂತರ ಅಲ್ಲಿ ಹಣ ಇರಿಸಲು ಮನಸ್ಸಿಲ್ಲದಿದ್ದರೆ ಹಣವನ್ನು ಹಂತ ಹಂತವಾಗಿ ಹಿಂದಕ್ಕೆ ಪಡೆದುಕೊಳ್ಳಬಹುದು. ಆರಂಭದಲ್ಲಿ, ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮದ ಕಡೆಯಿಂದ ಸಿಗುವ ₹ 5 ಲಕ್ಷದವರೆಗಿನ ಮೊತ್ತವನ್ನು ಠೇವಣಿದಾರರಿಗೆ ನೀಡಲಾಗುತ್ತದೆ. ಅದಾದ ಎರಡು ವರ್ಷಗಳ ನಂತರದಲ್ಲಿ ₹ 50 ಸಾವಿರ, ಮೂರು ವರ್ಷಗಳ ನಂತರ ₹ 1 ಲಕ್ಷ, ನಾಲ್ಕು ವರ್ಷಗಳ ನಂತರ ₹ 3 ಲಕ್ಷ, ಐದು ವರ್ಷಗಳ ನಂತರ ₹ 5.5 ಲಕ್ಷವನ್ನು ಹಿಂದಕ್ಕೆ ಪಡೆಯಬಹುದು. 10 ವರ್ಷಗಳು ಪೂರ್ಣಗೊಂಡ ನಂತರ ಅವರು ತಮ್ಮ ಅಷ್ಟೂ ಠೇವಣಿಯನ್ನು ಹಿಂದಕ್ಕೆ ಪಡೆಯಬಹುದು ಎಂದು ಸೋಮವಾರ ಪ್ರಕಟಿಸಲಾಗಿರುವ ಕರಡು ನಿಯಮಗಳಲ್ಲಿ ಹೇಳಲಾಗಿದೆ.
ಕರಡು ನಿಯಮಗಳಿಗೆ ಸಲಹೆಗಳನ್ನು, ವಿರೋಧವನ್ನು ಡಿಸೆಂಬರ್ 10ಕ್ಕೆ ಮೊದಲು ಆರ್‌ಬಿಐಗೆ ಸಲ್ಲಿಸಬೇಕು. ಇದಾದ ನಂತರ ಆರ್‌ಬಿಐ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.