ನವದೆಹಲಿ: ಆರ್‌ಬಿಐ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯ ವರದಿ ಬುಧವಾರ ಪ್ರಕಟಗೊಂಡಿದ್ದು, ಬಡ್ಡಿದರದಲ್ಲಿ (ರೆಪೊ ದರ) ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಇದರೊಂದಿಗೆ, ಸತತ ಒಂಭತ್ತನೇ ಬಾರಿ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಂತಾಗಿದೆ.
ಈಗಿರುವ ಶೇ 4ರ ಬಡ್ಡಿದರವನ್ನೇ ಮುಂದುವರಿಸುವುದಾಗಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಈಗಿರುವ ಶೇ 3.35 ರಿವರ್ಸ್ ರೆಪೊ ದರವನ್ನೂ ಮುಂದುವರಿಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.
22ನೇ ಹಣಕಾಸು ವರ್ಷಕ್ಕೆ ಶೇ 9.5ರ ಜಿಡಿಪಿ ಬೆಳವಣಿಗೆ ಗುರಿ ನಿಗದಿಪಡಿಸಲಾಗಿದೆ. ಆರ್ಥಿಕ ಬೆಳವಣಿಗೆಯ ಪುನಶ್ಚೇತನಕ್ಕಾಗಿ ಆರ್‌ಬಿಐ ಹೊಂದಾಣಿಕೆಯ ನಿಲುವನ್ನು ಮುಂದುವರಿಸಲಿದೆ ಎಂದು ದಾಸ್ ಹೇಳಿದ್ದಾರೆ.
ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಓಮೈಕ್ರಾನ್ ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿರುವ ಕಾರಣ ಆರ್‌ಬಿಐ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಉಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದರು. ಆರ್‌ಬಿಐ ಗವರ್ನರ್ ನೇತೃತ್ವದ ಎಂಪಿಸಿ ಸಭೆ ಸೋಮವಾರ ಆರಂಭಗೊಂಡಿತ್ತು.
ಭಾರತೀಯ ಷೇರುಗಳ ಮೌಲ್ಯ ಹೆಚ್ಚಳ: ಆರ್‌ಬಿಐ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಂಡಿರುವುದು ಮತ್ತು ಆರ್ಥಿಕತೆಯನ್ನು ಬೆಂಬಲಿಸುವ ಭರವಸೆ ನೀಡಿದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಉತ್ಸಾಹಕ್ಕೆ ಕಾರಣವಾಗಿದೆ. ಬುಧವಾರದ ಆರಂಭದ ವಹಿವಾಟಿನಲ್ಲಿ ಭಾರತೀಯ ಷೇರುಗಳ ಮೌಲ್ಯದಲ್ಲಿ ಹೆಚ್ಚಳ ಕಂಡುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.