ADVERTISEMENT

ನಾಳೆಯಿಂದ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ಆರಂಭ‌: ರೆ‍ಪೊ ದರದಲ್ಲಿ ಯಥಾಸ್ಥಿತಿ?

ಪಿಟಿಐ
Published 4 ಆಗಸ್ಟ್ 2024, 23:53 IST
Last Updated 4 ಆಗಸ್ಟ್ 2024, 23:53 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ಆಗಸ್ಟ್‌ 6ರಿಂದ 8ರವರೆಗೆ ನಡೆಯಲಿದ್ದು, ಈ ಬಾರಿಯೂ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆಯಿದೆ.

ಅಧ್ಯಕ್ಷತೆವಹಿಸಲಿರುವ ಗವರ್ನರ್‌ ಶಕ್ತಿಕಾಂತ ದಾಸ್‌, ಆಗಸ್ಟ್ 8ರಂದು ಸಭೆಯ ನಿರ್ಧಾರ ಪ್ರಕಟಿಸಲಿದ್ದಾರೆ.

ಶೇ 4ರ ಮಿತಿಯಲ್ಲಿ ಚಿಲ್ಲರೆ ಹಣದುಬ್ಬರವನ್ನು ಕಾಯ್ದುಕೊಳ್ಳುವುದು ಆರ್‌ಬಿಐ ಗುರಿಯಾಗಿದೆ. ಆದರೆ, ಹಣದುಬ್ಬರವು ಈ ಮಿತಿಯೊಳಗೆ ಬಂದಿಲ್ಲ. ಸದ್ಯ ರೆಪೊ ದರ ಶೇ 6.5ರಷ್ಟಿ‌ದ್ದು, 2023ರ ಫೆಬ್ರುವರಿಯಿಂದಲೂ ಬದಲಾವಣೆ ಮಾಡಿಲ್ಲ. 

ADVERTISEMENT

ರೆಪೊ ದರ ಇಳಿಕೆಗೂ ಮೊದಲು ಆರ್‌ಬಿಐ, ಅಮೆರಿಕದ ಕೇಂದ್ರೀಯ ಬ್ಯಾಂಕ್ ಆದ ಫೆಡರಲ್‌ ರಿಸರ್ವ್‌ನ ನಿರ್ಧಾರವನ್ನು ಅವಲೋಕಿಸಲಿದೆ. ಫೆಡರಲ್‌ ರಿಸರ್ವ್‌ ಬಡ್ಡಿದರ ಕಡಿತಗೊಳಿಸಿಲ್ಲ. ಹಾಗಾಗಿ, ಆರ್‌ಬಿಐ ಕೂಡ ಇದೇ ಹಾದಿ ತುಳಿಯುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.

‘ಸದ್ಯ ಚಿಲ್ಲರೆ ಹಣದುಬ್ಬರವು ಶೇ 5.1ರಷ್ಟಿದೆ. ಮುಂಬರುವ ತಿಂಗಳುಗಳಲ್ಲಿ ಇದು ಇಳಿಕೆಯಾಗುವ ಸಾಧ್ಯತೆಯಿದೆ. ಅಲ್ಲಿಯವರೆಗೂ ರೆಪೊ ದರ ಪರಿಷ್ಕರಣೆ ಮಾಡುವ ಸಾಧ್ಯತೆ ಇಲ್ಲ’ ಎಂದು ಬ್ಯಾಂಕ್‌ ಆಫ್‌ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ತಿಳಿಸಿದ್ದಾರೆ.

ಈಗಿರುವ ಬಡ್ಡಿದರವು ವ್ಯಾಪಾರ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ. 

‘ಸಭೆಯಲ್ಲಿ ಜಿಡಿಪಿ ಬೆಳವಣಿಗೆಯನ್ನು ಪರಿಷ್ಕರಿಸುವ ಸಾಧ್ಯತೆ ಕಡಿಮೆ. ಹಣದುಬ್ಬರದ ಸ್ಥಿತಿಗತಿ ಬಗ್ಗೆ ಹೆಚ್ಚಿನ ವಿವರಣೆ ನೀಡುವ ನಿರೀಕ್ಷೆಯಿದೆ’ ಎಂದು ಹೇಳಿದ್ದಾರೆ.

‘ರೆಪೊ ದರ ಕಡಿತಗೊಳಿಸಿದರೆ ಗೃಹ ಸಾಲ ಪಡೆದವರಿಗೆ ಕೊಂಚ ಪರಿಹಾರ ಸಿಗಲಿದೆ. ಆರ್ಥಿಕತೆ ಬೆಳವಣಿಗೆಗೆ ನೆರವಾಗಲಿದೆ. ರಿಯಲ್‌ ಎಸ್ಟೇಟ್‌ ಸೇರಿ ಹಲವು ವಲಯಗಳು ಅಭಿವೃದ್ಧಿಯಾಗಲಿವೆ. ಅಲ್ಲದೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 4.9ರಷ್ಟು ವಿತ್ತೀಯ ಕೊರತೆ ಕಾಯ್ದುಕೊಳ್ಳುವ ಸರ್ಕಾರದ ಗುರಿ ಸಾಧನೆಗೂ ಸಹಕಾರಿಯಾಗಲಿದೆ’ ಎಂದು ಸಿಗ್ನೆಚರ್‌ ಗ್ಲೋಬಲ್‌ (ಇಂಡಿಯಾ) ಸಂಸ್ಥಾಪಕ ಮತ್ತು ಮುಖ್ಯಸ್ಥ ಪ್ರದೀಪ್‌ ಅಗರ್ವಾಲ್ ತಿಳಿಸಿದ್ದಾರೆ.

ಡಿಸೆಂಬರ್‌ನಲ್ಲಿ ಕಡಿತ ಸಾಧ್ಯತೆ
‘ಪ್ರಸಕ್ತ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಹಣದುಬ್ಬರವು ಶೇ 4.9ರಷ್ಟಿದೆ. ಹಾಗಾಗಿ ರೆಪೊ ದರ ಕಡಿತ ಕುರಿತಂತೆ ಹಿಂದಿನ ಸಭೆಯಲ್ಲಿ ಕೈಗೊಂಡಿದ್ದ ಎಂಪಿಸಿ ಸದಸ್ಯರ ಮತ ಚಲಾವಣೆ ನಿರ್ಧಾರದಲ್ಲಿ ಬದಲಾವಣೆಯಾಗುವ ಸಾಧ್ಯತೆ ಕಡಿಮೆಯಿದೆ’ ಎಂದು ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ. ‘ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಾದರೆ ಆಹಾರ ಪದಾರ್ಥಗಳ ಬೆಲೆ ಇಳಿಕೆಯಾಗಲಿದೆ. ಜಾಗತಿಕ ಅಥವಾ ದೇಶೀಯ ಮಟ್ಟದಲ್ಲಿ ಬಿಕ್ಕಟ್ಟು ತಲೆದೋರದಿದ್ದರೆ ಅಕ್ಟೋಬರ್‌ನಲ್ಲಿ ನಡೆಯುವ ಎಂ‍ಪಿಸಿ ಸಭೆಯಲ್ಲಿ ರೆಪೊ ದರ ಕಡಿತಗೊಳಿಸಲು ಆರ್‌ಬಿಐ ನಿರ್ಧಾರಕೈಗೊಳ್ಳಲಿದೆ. ಡಿಸೆಂಬರ್‌ನಲ್ಲಿ ಶೇ 0.25ರಷ್ಟು ಕಡಿತಗೊಳಿಸಬಹುದು. ಬಳಿಕ 2025ರ ಫೆಬ್ರುವರಿಯಲ್ಲಿ ಇಷ್ಟೇ ಪ್ರಮಾಣದಲ್ಲಿ ಇಳಿಕೆ ಮಾಡುವ ಸಾಧ್ಯತೆಯಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.