ADVERTISEMENT

ಏಪ್ರಿಲ್‌ 3ರಿಂದ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ಆರಂಭ: ರೆಪೊ ದರ ಯಥಾಸ್ಥಿತಿ?

ಪಿಟಿಐ
Published 31 ಮಾರ್ಚ್ 2024, 14:37 IST
Last Updated 31 ಮಾರ್ಚ್ 2024, 14:37 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮುಂಬೈ: ದೇಶದಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಂಡು ಬೆಲೆಯಲ್ಲಿ ಸ್ಥಿರತೆ ಕಾಪಾಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಪ್ರಯತ್ನಿಸುತ್ತಿದೆ. ಹಾಗಾಗಿ, ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆಯು (ಎಂಪಿಸಿ) ಏಪ್ರಿಲ್‌ 3ರಿಂದ 5ರ ವರೆಗೆ ನಡೆಯಲಿದೆ. 2024–25ನೇ ಆರ್ಥಿಕ ವರ್ಷದಲ್ಲಿ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ಕೊನೆಯ ದಿನದಂದು ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಸಭೆಯ ನಿರ್ಣಯವನ್ನು ಪ್ರಕಟಿಸಲಿದ್ದಾರೆ. ಸದ್ಯ ರೆಪೊ ದರವು ಶೇ 6.5ರಷ್ಟಿದೆ. 

ADVERTISEMENT

ಬ್ರಿಟನ್‌ ಹಾಗೂ ಅಮೆರಿಕ ಕೂಡ ಬಡ್ಡಿದರ ಕಡಿತಕ್ಕೆ ಸಂಬಂಧಿಸಿದಂತೆ ಕಾದುನೋಡುವ ತಂತ್ರ ಅನುಸರಿಸುತ್ತಿವೆ. ಆದರೆ, ಸ್ವಿಟ್ಜರ್ಲೆಂಡ್‌ ಬಡ್ಡಿದರ ಕಡಿತ ಮಾಡಿದೆ. ಮತ್ತೊಂದೆಡೆ ಜಪಾನ್‌ನಲ್ಲಿ ಎಂಟು ವರ್ಷಗಳಿಂದ ಜಾರಿಯಲ್ಲಿದ್ದ ಋಣಾತ್ಮಕ ಬಡ್ಡಿದರ ನೀತಿಯು ಮುಕ್ತಾಯಗೊಂಡಿದೆ. ಹಾಗಾಗಿ, ಜಾಗತಿಕ ಮಟ್ಟದಲ್ಲಿ ಹಲವು ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರಕ್ಕೆ ಸಂಬಂಧಿಸಿದಂತೆ  ಅನುಸರಿಸುತ್ತಿರುವ ನೀತಿಗಳ ಬಗ್ಗೆ ಆರ್‌ಬಿಐ ಅವಲೋಕಿಸಲಿದೆ. ‌‌‌‌

‘ಚಿಲ್ಲರೆ ಹಣದುಬ್ಬರವು ಶೇ 5ರಷ್ಟಿದೆ. ಅಲ್ಲದೆ, ಮುಂಬರುವ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಸಂಭವವಿದೆ. ಆರ್ಥಿಕತೆ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಲು ಬಡ್ಡಿದರದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಅಗತ್ಯವಿದೆ. ಹಾಗಾಗಿ, ಎಂಪಿಸಿ ಸಭೆಯು ಈ ಬಾರಿಯೂ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರೀಕ್ಷೆ ಹೆಚ್ಚಿದೆ’ ಎಂದು ಬ್ಯಾಂಕ್‌ ಆಫ್‌ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಹೇಳಿದ್ದಾರೆ.

‘ಹಣದುಬ್ಬರ ನಿಯಂತ್ರಣದ ಮೇಲೆ ಆರ್‌ಬಿಐ ಹೆಚ್ಚು ಗಮನ ಕೇಂದ್ರೀಕರಿಸಿದೆ. 2023–24ನೇ ಆರ್ಥಿಕ ವರ್ಷದ ತ್ರೈಮಾಸಿಕ ಅವಧಿಗಳಲ್ಲಿ ದೇಶದ ಜಿಡಿಪಿ ನಿರೀಕ್ಷೆಗಿಂತಲೂ ಹೆಚ್ಚು ಪ್ರಗತಿ ಕಂಡಿದೆ. ಹಾಗಾಗಿ, ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು ಪರಿಷ್ಕರಿಸುವ ಸಾಧ್ಯತೆ ಇದೆ’ ಎಂದಿದ್ದಾರೆ.‌

‘ಮುಂಗಾರು ಹಂಗಾಮಿನ ಸ್ಥಿತಿಗತಿ, ಆರ್ಥಿಕತೆ ಬೆಳವಣಿಗೆಯ ವೇಗ ಹಾಗೂ ಬಡ್ಡಿದರ ಕಡಿತ ಸಂಬಂಧ ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಕೈಗೊಳ್ಳುವ ನಿರ್ಣಯವನ್ನು ಆರ್‌ಬಿಐ ಅವಲೋಕಿಸುತ್ತಿದೆ. ಹಾಗಾಗಿ, ಆಗಸ್ಟ್‌ನಲ್ಲಿ ನಡೆಯುವ ಎಂ‍ಪಿಸಿ ಸಭೆಗೂ ಮೊದಲೇ ಹಣಕಾಸು ನೀತಿಯಲ್ಲಿ ಬದಲಾವಣೆ ತರುವ ಸಂಭವ ತೀರಾ ಕಡಿಮೆ’ ಎಂದು ರೇಟಿಂಗ್ಸ್‌ ಸಂಸ್ಥೆ ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.