ADVERTISEMENT

‘ಆರ್‌ಬಿಐ ಬಡ್ಡಿ ದರ ಕಡಿತ ಅಗತ್ಯ’

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಅಧ್ಯಯನ ವರದಿ

​ಪ್ರಜಾವಾಣಿ ವಾರ್ತೆ
Published 16 ಮೇ 2019, 20:15 IST
Last Updated 16 ಮೇ 2019, 20:15 IST
ಅಧಿಕ ಬಡ್ಡಿ ದರ
ಅಧಿಕ ಬಡ್ಡಿ ದರ   

ನವದೆಹಲಿ: ಆರ್ಥಿಕ ಪ್ರಗತಿಯಲ್ಲಿನ ಸದ್ಯದ ಕುಂಠಿತ ಪ್ರಗತಿಗೆ ಚೇತರಿಕೆ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಶೇ 0.25ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿ ದರ ಕಡಿಮೆ ಮಾಡುವ ಅಗತ್ಯ ಇದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಅಧ್ಯಯನ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಆರ್‌ಬಿಐ, ಈ ಹಿಂದಿನ ಎರಡು ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಗಳಲ್ಲಿ ತಲಾ ಶೇ 0.25ರಂತೆ ತನ್ನ ಅಲ್ಪಾವಧಿ ಬಡ್ಡಿ ದರ (ರೆಪೊ) ಕಡಿತಗೊಳಿಸಿದೆ. ಜೂನ್‌ 6ರಂದು ಮುಂದಿನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ನಡೆಯಲಿದೆ.

ಸದ್ಯಕ್ಕೆ ದೇಶಿ ಆರ್ಥಿಕತೆಯ ಬೆಳವಣಿಗೆಯಲ್ಲಿ ಮಂದಗತಿ ಕಂಡುಬರುತ್ತಿದೆ. ದೇಶಿ ಷೇರುಪೇಟೆಗಳಲ್ಲಿ ಈ ಕುಂಠಿತ ಪ್ರಗತಿ ಪ್ರತಿಫಲನಗೊಳ್ಳುತ್ತಿದೆ. 2018–19ರ ಹಣಕಾಸು ವರ್ಷದ ನಾಲ್ಕನೆ ತ್ರೈಮಾಸಿಕದಲ್ಲಿ ಮೂಲಸೌಕರ್ಯ ಸೇವೆಗಳು, ದೂರಸಂಪರ್ಕ ಸಲಕರಣೆ, ಪೆಟ್ರೊಕೆಮಿಕಲ್ಸ್‌ ಮತ್ತು ಎರಕಹೊಯ್ಯುವ ವಲಯದಲ್ಲಿ ಕುಸಿತ ಕಂಡುಬಂದಿದೆ.

ADVERTISEMENT

ರಫ್ತನ್ನೇ ಹೆಚ್ಚಾಗಿ ಅವಲಂಬಿಸಿರುವ ಔಷಧಿ ತಯಾರಿಕಾ ಸಂಸ್ಥೆಗಳ ವಹಿವಾಟು ಕೂಡ ಕಡಿಮೆ ಪ್ರಮಾಣದ ಬೆಳವಣಿಗೆ ಕಂಡಿದೆ. ಮಾರ್ಚ್‌
ತ್ರೈಮಾಸಿಕದಲ್ಲಿ ಬಹುತೇಕ ಕಂಪನಿಗಳ ಪ್ರಗತಿ ಹಿನ್ನಡೆ ಕಂಡಿದೆ. ಗ್ರಾಮೀಣ ಆರ್ಥಿಕತೆಯ ಸಂಕಷ್ಟದಿಂದಾಗಿ ಬೇಡಿಕೆ ಕುಸಿದಿದೆ. ಇದು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ) ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.