ADVERTISEMENT

ನಗರ ಸಹಕಾರ ಬ್ಯಾಂಕ್‌ಗಳ ಎನ್‌ಪಿಎ ಬಗ್ಗೆ RBI ಗವರ್ನರ್‌ ದಾಸ್‌ ಅತೃಪ್ತಿ

ಪಿಟಿಐ
Published 25 ಸೆಪ್ಟೆಂಬರ್ 2023, 16:15 IST
Last Updated 25 ಸೆಪ್ಟೆಂಬರ್ 2023, 16:15 IST
ಶಕ್ತಿಕಾಂತ ದಾಸ್
ಶಕ್ತಿಕಾಂತ ದಾಸ್   

ಮುಂಬೈ: ನಗರ ಸಹಕಾರ ಬ್ಯಾಂಕ್‌ಗಳಲ್ಲಿ ಇರುವ ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಜಿಎನ್‌ಪಿಎ) ಶೇ 8.7ರಷ್ಟು ಇದ್ದು, ಸಹಿಸಿಕೊಳ್ಳಬಹುದಾದ ಮಟ್ಟದಲ್ಲಿ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ ದಾಸ್ ಸೋಮವಾರ ಹೇಳಿದ್ಧಾರೆ.

ಆರ್‌ಬಿಐ ಆಯೋಜಿಸಿದ್ದ ಸಮಾವೇಶದಲ್ಲಿ ನಗರ ಸಹಕಾರಿ ಬ್ಯಾಂಕ್‌ಗಳ ನಿರ್ದೇಶಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಎನ್‌ಪಿಎ ಹೆಚ್ಚಿಗೆ ಇರುವ ಬ್ಯಾಂಕ್‌ಗಳು ಆಡಳಿತದಲ್ಲಿ ಸುಧಾರಣೆ ತಂದುಕೊಳ್ಳುವಂತೆ ಮತ್ತು ಸಾಲ ವಸೂಲಿ ಮಾಡುವ ಕಡೆಗೆ ಗಮನ ಹರಿಸುವಂತೆ ಸಲಹೆ ನೀಡಿದ್ದಾರೆ.

ವಾಣಿಜ್ಯ ಬ್ಯಾಂಕ್‌ಗಳ ಜಿಎನ್‌ಪಿಎ 2023ರ ಮಾರ್ಚ್ ಅಂತ್ಯದ ವೇಳೆಗೆ ಶೇ 3.9ರಷ್ಟು ಇದ್ದು, ದಶಕದಲ್ಲೇ ಅತ್ಯಂತ ಕಡಿಮೆ ಪ್ರಮಾಣ ಇದಾಗಿದೆ. ಈ ಪ್ರಮಾಣವು ಇನ್ನಷ್ಟು ಇಳಿಕೆ ಕಾಣುವ ಅಂದಾಜು ಮಾಡಲಾಗಿದೆ.

ADVERTISEMENT

ಸಾಲಗಾರ ಸಾಲ ಮರುಪಾವತಿಸದೇ ಇದ್ದರೆ ಬ್ಯಾಂಕ್‌ಗೆ ಆರ್ಥಿಕ ನಷ್ಟ ಆಗುತ್ತದೆ. ಹೀಗಾಗಿ ಸಕಾಲಕ್ಕೆ ಸಾಲ ವಸೂಲಿ ಮಾಡುವ ಮೂಲಕ ಎನ್‌ಪಿಎ ಪ್ರಮಾಣ ಕಡಿಮೆ ಮಾಡಲು ಗಮನ ಹರಿಸುವಂತೆ ನಗರ ಸಹಕಾರ ಬ್ಯಾಂಕ್‌ಗಳಿಗೆ ದಾಸ್‌ ಸಲಹೆ ನೀಡಿದ್ದಾರೆ.

ಒಟ್ಟು ಬಾಕಿ ಇರುವ ಸಾಲದಲ್ಲಿ ಶೇ 60ರಷ್ಟು ಪಾಲು ಪ್ರಮುಖ 20 ಖಾತೆಗಳದ್ದಾಗಿದೆ. ಇದನ್ನು ವಸೂಲಿ ಮಾಡಲು ಗಮನ ಹರಿಸುವುದರಿಂದ ಒಟ್ಟಾರೆಯಾಗಿ ಎನ್‌ಪಿಎ ಸುಧಾರಿಸಲು ನೆರವಾಗುತ್ತದೆ ಎಂದು ಹೇಳಿದ್ದಾರೆ.

ಹಲವು ಸಂದರ್ಭಗಳಲ್ಲಿ ನಿಯಮಗಳ ಅನುಸರಣೆಯು ಕೇವಲ ಪುಸ್ತಕದಲ್ಲಿ ಇರುವುದು ಕಂಡುಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಯಾವುದೇ ನಿಯಮಗಳ ಅನುಸರಣೆ ಆಗುತ್ತಿರುವುದು ಕಂಡುಬರುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಆಂತರಿಕ ಲೆಕ್ಕಪರಿಶೋಧನೆ ಕಡೆಗೂ ಬ್ಯಾಂಕ್‌ಗಳು ಗಮನ ಹರಿಸಬೇಕಿದೆ ಎಂದು ಅವರು ಒತ್ತಿ ಹೇಳಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.