ಮುಂಬೈ: 2024–25ನೇ ಆರ್ಥಿಕ ವರ್ಷದ ಜಿಡಿಪಿ ಬೆಳವಣಿಗೆಯನ್ನು ಹಣಕಾಸು ನೀತಿ ಸಮಿತಿಯು ಪರಿಷ್ಕರಿಸಿದ್ದು, ಶೇ 7.2ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿದೆ.
ಈ ಮೊದಲ ಶೇ 7ರಷ್ಟು ಪ್ರಗತಿ ದಾಖಲಿಸಿದೆ ಎಂದು ಹೇಳಿತ್ತು. ಆದರೆ, ದಿನಬಳಕೆಯ ಸರಕು ಮತ್ತು ಸೇವೆಯಲ್ಲಿನ ವೆಚ್ಚದ ಏರಿಕೆ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆ ಹೆಚ್ಚಳದಿಂದಾಗಿ ಈ ಪ್ರಗತಿ ಸಾಧ್ಯವಾಗಲಿದೆ ಎಂದು ಹೇಳಿದೆ.
‘2023–24ನೇ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿಯು ಶೇ 8.2ರಷ್ಟು ಪ್ರಗತಿ ಕಂಡಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ ವರದಿ ತಿಳಿಸಿದೆ. 2024–25ರಲ್ಲಿಯೂ ದೇಶದ ಆರ್ಥಿಕ ಚಟುವಟಿಕೆಗಳು ಚೇತರಿಕೆ ಕಾಣಲಿವೆ. ದೇಶೀಯ ಮಟ್ಟದಲ್ಲಿನ ಬೇಡಿಕೆ ಹೆಚ್ಚಳದಿಂದಾಗಿ ತಯಾರಿಕಾ ಚಟುವಟಿಕೆಗಳು ಲಾಭದ ಪಥದಲ್ಲಿ ಸಾಗಲಿವೆ’ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಸೇವಾ ವಲಯ ಕೂಡ ಬೆಲೆ ಇಳಿಕೆಯ ಪರದಿಯಿಂದ ಹೊರಬಂದು ಮೊದಲಿನ ದೃಢತೆಯ ಮಟ್ಟಕ್ಕೆ ತಲುಪಲಿದೆ ಎಂದು ಹೇಳಿದ್ದಾರೆ.
ನಗರ ಪ್ರದೇಶದಲ್ಲಿಯೂ ಸರಕು ಮತ್ತು ಸೇವಾ ವೆಚ್ಚ ಮತ್ತು ಬೇಡಿಕೆಯು ಚೇತರಿಸಿಕೊಳ್ಳುತ್ತಿದೆ. ಕೃಷಿ ಮತ್ತು ಹೂಡಿಕೆ ವಲಯಗಳಲ್ಲಿನ ಸುಧಾರಣೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆ ಹೆಚ್ಚಲಿದೆ. ಇದು ಕೃಷಿ, ಕೈಗಾರಿಕೆ, ಸೇವೆ ವಲಯ ಹಾಗೂ ವೈಯಕ್ತಿಕ ಸಾಲದ ಪ್ರಮಾಣವನ್ನು ವಿಸ್ತರಿಸಲು ವಾಣಿಜ್ಯ ಬ್ಯಾಂಕ್‌ಗಳಿಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.