ADVERTISEMENT

ಬ್ಯಾಂಕ್‌ಗಳನ್ನು ಮುಚ್ಚುವ ಚಿಂತನೆ ಇಲ್ಲ; ಆರ್‌ಬಿಐ ಸ್ಪಷ್ಟನೆ

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು ಸುಳ್ಳುಸುದ್ದಿ

ಪಿಟಿಐ
Published 25 ಸೆಪ್ಟೆಂಬರ್ 2019, 13:17 IST
Last Updated 25 ಸೆಪ್ಟೆಂಬರ್ 2019, 13:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಒಂಬತ್ತು ವಾಣಿಜ್ಯ ಬ್ಯಾಂಕ್‌ಗಳನ್ನು ಮುಚ್ಚಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಮುಂದಾಗಲಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಗಾಳಿಸುದ್ದಿಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರೀಯ ಬ್ಯಾಂಕ್‌ ಸ್ಪಷ್ಟಪಡಿಸಿದೆ.

‘ಸಾಮಾಜಿಕ ಮಾಧ್ಯಮಗಳಲ್ಲಿನ ಸಂದೇಶಗಳು ಸಂಪೂರ್ಣ ಸುಳ್ಳು. ಅದೊಂದು ಕುಚೇಷ್ಟೆಯ ಕೃತ್ಯ. ಇಂತಹ ವರದಿಗಳನ್ನು ಯಾರೊಬ್ಬರೂ ನಂಬಬಾರದು. ಬಂಡವಾಳ ಪುನರ್ಧನದ ಮೂಲಕ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಬಲಪಡಿಸಲು ಸರ್ಕಾರ ಮುಂದಾಗಿದೆ’ ಎಂದು ಹಣಕಾಸು ಕಾರ್ಯದರ್ಶಿ ರಾಜೀವ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ಒಂಬತ್ತು ಬ್ಯಾಂಕ್‌ಗಳನ್ನು ಶಾಶ್ವತವಾಗಿ ಮುಚ್ಚಲು ಆರ್‌ಬಿಐ ಮುಂದಾಗಿದೆ. ಜನರು ತಮ್ಮ ಠೇವಣಿಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡ ಸಂದೇಶ ಹರಿದಾಡಿತ್ತು. ಪಂಜಾಬ್‌ ಆ್ಯಂಡ್‌ ಮಹಾರಾಷ್ಟ್ರ ಕೊ–ಆಪರೇಟಿವ್‌ ಬ್ಯಾಂಕ್‌ನ (ಪಿಎಂಸಿ) ಕಾರ್ಯನಿರ್ವಹಣೆಗೆ ಆರ್‌ಬಿಐ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಈ ಗಾಳಿ ಸುದ್ದಿ ಹರಡಿತ್ತು. ಇತರ ಬ್ಯಾಂಕ್‌ಗಳ ಜತೆ ವಿಲೀನಗೊಂಡ ಅಥವಾ ವಿಲೀನ ಪ್ರಕ್ರಿಯೆಯಲ್ಲಿ ಇರುವ ಬ್ಯಾಂಕ್‌ಗಳನ್ನು ಶಾಶ್ವತವಾಗಿ ಮುಚ್ಚಲು ನಿರ್ಧರಿಸಲಾಗಿದೆ ಎಂದು ವರದಿಯಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.