ನವದೆಹಲಿ: ಸದ್ಯದ ಜಾಗತಿಕ ರಾಜಕೀಯ ಬಿಕ್ಕಟ್ಟನ್ನು ಗಮನದಲ್ಲಿ ಇಟ್ಟುಕೊಂಡು ಪ್ರಸಕ್ತ ಹಣಕಾಸು ವರ್ಷಕ್ಕೆ ಚಿಲ್ಲರೆ ಹಣದುಬ್ಬರದ ಅಂದಾಜನ್ನು ಶೇ 4.5 ರಿಂದ ಶೇ 5.7ಕ್ಕೆ ಹೆಚ್ಚಳ ಮಾಡಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ತಿಳಿಸಿದೆ.
ಫೆಬ್ರುವರಿಯಲ್ಲಿ ನಡೆದಿದ್ದ ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಚಿಲ್ಲರೆ ಹಣದುಬ್ಬರವು ಶೇ 4.5ರಷ್ಟು ಆಗುವ ಅಂದಾಜು ಮಾಡಲಾಗಿತ್ತು.
ಫೆಬ್ರುವರಿ ಅಂತ್ಯದಿಂದ ಜಾಗತಿಕ ರಾಜಕೀಯ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದು, ಈ ಹಿಂದಿನ ಹಣದುಬ್ಬರದ ಅಂದಾಜನ್ನು ಮೀರಿಸುವಂತೆ ಮಾಡಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಹಣದುಬ್ಬರದ ಪರಿಷ್ಕೃತ ಅಂದಾಜಿನ ಕುರಿತು ಪ್ರತಿಕ್ರಿಯೆ ನೀಡಿದರು.
ರಷ್ಯಾ–ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಕಚ್ಚಾತೈಲ ದರ ಮತ್ತು ಅಡುಗೆ ಎಣ್ಣೆ ದರವು ಏರುಮುಖವಾಗಿಯೇ ಇರಲಿದೆ ಎಂದು ಅವರು ಹೇಳಿದರು.
ಹಿಂಗಾರು ಅವಧಿಯಲ್ಲಿ ಏಕದಳ ಧಾನ್ಯ ಮತ್ತು ಬೇಳೆಕಾಳುಗಳ ಬಿತ್ತನೆಯು ದಾಖಲೆ ಮಟ್ಟದಲ್ಲಿದೆ. ಹೀಗಾಗಿ ಇವುಗಳ ಬೆಲೆಯು ತುಸು ಕಡಿಮೆ ಆಗುವ ನಿರೀಕ್ಷೆ ಮಾಡಲಾಗಿದೆ ಎಂದರು.
ಫೆಬ್ರುವರಿಯಿಂದೀಚೆಗೆ ಕಚ್ಚಾ ತೈಲದರ ಏರಿಕೆ ಅಗುತ್ತಿದೆ. ಇದು ನೇರ ಮತ್ತು ಪರೋಕ್ಷವಾಗಿ ಹಣದುಬ್ಬರದ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸರಕುಗಳ ದರ ಹೆಚ್ಚಳ ಆಗಿರುವುದು ಮತ್ತು ಸಾಗಣೆ ವ್ಯವಸ್ಥೆಯಲ್ಲಿನ ಅಡಚಣೆಯು ಕೃಷಿ, ತಯಾರಿಕೆ ಮತ್ತು ಸೇವಾ ವಲಯಗಳ ವೆಚ್ಚವನ್ನು ಹೆಚ್ಚಾಗುವಂತೆ ಮಾಡಲಿದೆ ಎಂದು ತಿಳಿಸಿದರು.
ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ಶೇ 6.01ರಷ್ಟು ಇತ್ತು. ಫೆಬ್ರುವರಿಯಲ್ಲಿ ಶೇ 6.07ಕ್ಕೆ ಏರಿಕೆ ಆಗಿದೆ.
ಹಣದುಬ್ಬರ ನಿಯಂತ್ರಣಕ್ಕೆ ಆದ್ಯತೆ: ಹಣಕಾಸು ನೀತಿಯ ಆದ್ಯತೆಯಲ್ಲಿ ಬದಲಾವಣೆ ಮಾಡಿಕೊಳ್ಳಲು ಎಂಪಿಸಿ ಸದಸ್ಯರು ಒಪ್ಪಿಗೆ ನೀಡಿದ್ದಾರೆ ಎಂದು ದಾಸ್ ಹೇಳಿದ್ದಾರೆ.
ಇನ್ನುಮೂದೆ, ಹಣದುಬ್ಬರ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಆ ಬಳಿಕ ಆರ್ಥಿಕ ಬೆಳವಣಿಗೆಯ ನಿಟ್ಟಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕೋವಿಡ್ ಆರಂಭ ಆದಾಗಿನಿಂದ ಈವರೆಗೆ, ಆರ್ಥಿಕ ಬೆಳವಣಿಗೆಗೆ ಅಗತ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಮೊದಲ ಆದ್ಯತೆಯಾಗಿ ಆರ್‌ಬಿಐ ಪರಿಗಣಿಸಿದೆ.
ಜಿಡಿಪಿ ಬೆಳವಣಿಗೆ ಅಂದಾಜು ಇಳಿಕೆ
ರಷ್ಯಾ–ಉಕ್ರೇನ್ ಸಂಘರ್ಷದಿಂದಾಗಿ ಕಚ್ಚಾ ತೈಲ ದರ ಹೆಚ್ಚಾಗಿದೆ. ಪೂರೈಕೆ ವ್ಯವಸ್ಥೆಯಲ್ಲಿ ಅಡಚಣೆ ಎದುರಾಗಿದೆ. ಹೀಗಾಗಿ ಏಪ್ರಿಲ್ 1ರಿಂದ ಅರಂಭ ಆಗಿರುವ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಶೇ 7.8ರಿಂದ ಶೇ 7.2ಕ್ಕೆ ತಗ್ಗಿಸಿರುವುದಾಗಿ ಎಂದು ಆರ್‌ಬಿಐ ಹೇಳಿದೆ.
ಹೀಗಿದ್ದರೂ, ಆರ್ಥಿಕ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳುವುದಾಗಿ ಅದು ತಿಳಿಸಿದೆ.
ಬಡ್ಡಿದರ ಬದಲಿಲ್ಲ
ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ಶುಕ್ರವಾರ ನಿರ್ಧರಿಸಿತು. ಸತತ 11ನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಸದ್ಯ ರೆಪೊ ದರವು ಶೇ 4ರಷ್ಟು ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.