ADVERTISEMENT

ವಿದೇಶಿ ಬಾಂಡ್‌: ಆರ್‌ಬಿಐ ಪರಾಮರ್ಶೆ

ಬಜೆಟ್‌ ಪ್ರಸ್ತಾವಕ್ಕೆ ವ್ಯಕ್ತವಾದ ಟೀಕೆ * ಆಗಸ್ಟ್‌ 16ರ ನಿರ್ದೇಶಕ ಮಂಡಳಿ ಸಭೆಯಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 20:31 IST
Last Updated 29 ಜುಲೈ 2019, 20:31 IST
ಆರ್‌ಬಿಐ ಲಾಂಛನ
ಆರ್‌ಬಿಐ ಲಾಂಛನ   

ಬೆಂಗಳೂರು: ವಿದೇಶಿ ಕರೆನ್ಸಿ ರೂಪದಲ್ಲಿ ಸಾಲ ಸಂಗ್ರಹಿಸುವ ಕೇಂದ್ರ ಸರ್ಕಾರದ ಬಜೆಟ್‌ ಪ್ರಸ್ತಾವವನ್ನು ವಿವರವಾಗಿ ಚರ್ಚಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಉದ್ದೇಶಿಸಿದೆ.

ವಿದೇಶಿ ಬಾಂಡ್‌ಗಳಿಂದ ಬಂಡವಾಳ ಕ್ರೋಡೀಕರಣ ಮಾಡುವುದಕ್ಕೆ ಅನೇಕ ವಲಯಗಳಿಂದ ಆಕ್ಷೇಪ ಕೇಳಿ ಬರುತ್ತಿರುವುದರಿಂದ ಆರ್‌ಬಿಐ ಈ ನಿರ್ಧಾರಕ್ಕೆ ಬಂದಿದೆ.

ಆಗಸ್ಟ್‌ 16ರಂದು ಸಭೆ ಸೇರಲಿರುವ ಆರ್‌ಬಿಐ ನಿರ್ದೇಶಕ ಮಂಡಳಿಯಲ್ಲಿ ಇತರ ವಿಷಯಗಳ ಜತೆಗೆ ವಿದೇಶಿ ಬಾಂಡ್‌ ಪ್ರಸ್ತಾವವನ್ನೂ ಚರ್ಚಿಸುವ ಸಾಧ್ಯತೆ ಇದೆ. ಆರ್ಥಿಕ ತಜ್ಞರು ವ್ಯಕ್ತಪಡಿಸಿರುವ ಕಳವಳವನ್ನು ವಿವರವಾಗಿ ಪರಾಮರ್ಶಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ADVERTISEMENT

ವಿವಾದಕ್ಕೆ ಗುರಿಯಾದ ಪ್ರಸ್ತಾವ: ವಿದೇಶಿ ಬಾಂಡ್‌ಗಳಿಂದ ಸಾಲ ಎತ್ತುವ ಬಜೆಟ್‌ ಪ್ರಸ್ತಾವನೆಯು ಈಗ ವಿವಾದಕ್ಕೆ ಗುರಿಯಾಗಿದೆ.

ಈ ಪ್ರಸ್ತಾವದ ಬಗ್ಗೆ ಅಧ್ಯಯನ ನಡೆಸಿ ಸಮಗ್ರ ವರದಿ ಸಲ್ಲಿಸಲು ಪ್ರಧಾನಿ ಕಚೇರಿ ಆದೇಶಿಸಿದೆ ಎಂದು ವರದಿಯಾಗಿದೆ. ವಿದೇಶಿ ಬಾಂಡ್ ಬಗ್ಗೆ ಮರು ಚಿಂತನೆ ನಡೆಸುವ ಸಾಧ್ಯತೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟನೆ ನೀಡಿದ್ದಾರೆ.

ಈ ಯೋಜನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಹಣಕಾಸು ಕಾರ್ಯದರ್ಶಿ ಸುಭಾಷ್‌ಚಂದ್ರ ಗರ್ಗ್‌ ಅವರನ್ನು ಕಳೆದವಾರ ಹಠಾತ್ತಾಗಿ ಇಂಧನ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ. ತಾವು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಆಗಿದ್ದಾಗ ಸರ್ಕಾರದಲ್ಲಿ ಇದ್ದ ಯಾರೊಬ್ಬರೂ ವಿದೇಶಿ ಬಾಂಡ್‌ನ ಸಾಧಕ –ಬಾಧಕಗಳ ಬಗ್ಗೆ ಪ್ರಶ್ನೆ ಮಾಡಿರಲಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ವಿದೇಶಿ ಬಾಂಡ್‌ ಪ್ರಸ್ತಾವವು ಅಪಾಯಕಾರಿ ಚಿಂತನೆ. ಅದರಿಂದ ದೇಶಕ್ಕೆ ಯಾವುದೇ ಪ್ರಯೋಜನ ದೊರೆಯುವುದಿಲ್ಲ ಎನ್ನುವ ಟೀಕೆಗಳು ಕೇಳಿ ಬರುತ್ತಿವೆ. ಟೀಕಾಕಾರರಲ್ಲಿ ಆರ್‌ಬಿಐನ ಮಾಜಿ ಗವರ್ನರ್‌ ರಘುರಾಂ ರಾಜನ್‌ ಅವರೂ ಸೇರಿದ್ದಾರೆ.

ಆರ್‌ಬಿಐ,ಕೇಂದ್ರ ಸರ್ಕಾರದ ಸಾಲವನ್ನು ನಿರ್ವಹಿಸುತ್ತಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಸಾಲ ಎತ್ತುವ ಕುರಿತು ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್‌ ಮಧ್ಯೆ ನಿಯಮಿತವಾಗಿ ಚರ್ಚೆ ನಡೆಯುತ್ತಿರುತ್ತದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ಇತ್ತೀಚೆಗೆ ಹೇಳಿದ್ದರು.

ಬಾಂಡ್‌ ಗಳಿಕೆ ಕುಸಿತ
ಮುಂಬೈ (ರಾಯಿಟರ್ಸ್‌):
ವಿದೇಶಿ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಸರ್ಕಾರದ ಧೋರಣೆ ಬದಲಾಗುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದರಿಂದ ದೇಶಿ ಬಾಂಡ್‌ಗಳ ಗಳಿಕೆಯು ಸೋಮವಾರ ಕುಸಿತ ಕಂಡಿತು.

ಆರ್‌ಬಿಐ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ತಗ್ಗಿಸಲಿದೆ ಎನ್ನುವುದು ತಮ್ಮ ಆಶಯವಾಗಿದೆ ಎಂದೂ ನಿರ್ಮಲಾ ಹೇಳಿದ್ದರು. ಈ ಹೇಳಿಕೆಯಿಂದಾಗಿ 10 ವರ್ಷಗಳ ಬಾಂಡ್‌ ಗಳಿಕೆಯು ಶೇ 0.11ರಷ್ಟು ಕಡಿಮೆಯಾಗಿ ಶೇ 6.42ಕ್ಕೆ ಇಳಿದಿದೆ.

ವಿದೇಶಿ ಬಾಂಡ್‌ ಪ್ರಸ್ತಾವವನ್ನು ಪ್ರಧಾನಿ ಕಚೇರಿಯು (ಪಿಎಂಒ) ಮರುಪರಿಶೀಲನೆ ಮಾಡಲಿದೆ ಎಂದು ಕಳೆದವಾರ ವರದಿಯಾದಾಗ ಬಾಂಡ್‌ಗಳ ಗಳಿಕೆಯು ಗಮನಾರ್ಹ ಏರಿಕೆ ಕಂಡಿತ್ತು.

ಆರ್‌ಬಿಐ, ಆಗಸ್ಟ್‌ 7ರಂದು ತನ್ನ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಲಿದ್ದು, ಶೇ 0.25ರಷ್ಟು ಬಡ್ಡಿ ದರ ಕಡಿತವಾಗಲಿದೆ ಎನ್ನುವುದು ಮಾರುಕಟ್ಟೆಯ ನಿರೀಕ್ಷೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.