ADVERTISEMENT

ಬಡ್ಡಿ ದರ ಯಥಾಸ್ಥಿತಿ ಸಾಧ್ಯತೆ

ಪಿಟಿಐ
Published 26 ನವೆಂಬರ್ 2018, 20:15 IST
Last Updated 26 ನವೆಂಬರ್ 2018, 20:15 IST
ಉರ್ಜಿತ್‌
ಉರ್ಜಿತ್‌   

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್ ತನ್ನ ಮುಂದಿನ ಹಣಕಾಸು ನೀತಿ ಪರಾಮರ್ಶೆ ಸಂದರ್ಭದಲ್ಲಿ ಅಲ್ಪಾವಧಿ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರೀಕ್ಷೆ ಇದೆ.

ಕೃಷಿ ಉತ್ಪಾದನೆ ಹೆಚ್ಚಳ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ, ಅಗ್ಗದ ತರಕಾರಿ, ಹಣ್ಣುಗಳು ಆಹಾರ ಹಣದುಬ್ಬರವನ್ನು ನಿಯಂತ್ರಣ ಮಟ್ಟದಲ್ಲಿ ಇರಿಸಿವೆ. ಸರ್ಕಾರದ ಖರೀದಿ ನೀತಿಯ ಫಲವಾಗಿ ಕೃಷಿ ಉತ್ಪಾದನೆ ಹೆಚ್ಚಳಗೊಳ್ಳಲಿದೆ.
ಈ ಎಲ್ಲ ಕಾರಣಗಳಿಗೆ ಕೇಂದ್ರೀಯ ಬ್ಯಾಂಕ್‌ ಬಡ್ಡಿ ದರಗಳನ್ನು ಬದಲಿಸುವ ಸಾಧ್ಯತೆ ಇಲ್ಲ ಎಂದು ಡನ್‌ ಆ್ಯಂಡ್‌ ಬ್ರಾಡ್‌ಸ್ಟ್ರೀಟ್‌ (ಡಿಆ್ಯಂಡ್‌ಬಿ) ಸಂಸ್ಥೆ ಅಭಿಪ್ರಾಯಪಟ್ಟಿದೆ.

‘ಕಚ್ಚಾ ತೈಲ ಬೆಲೆ ಇಳಿಕೆಯಿಂದ ಕೇಂದ್ರ ಸರ್ಕಾರದ ಚಾಲ್ತಿ ಖಾತೆ ಕೊರತೆ ಹೆಚ್ಚಳ, ವಿತ್ತೀಯ ಕೊರತೆ ಏರಿಕೆ, ಹಣದುಬ್ಬರ ಹೆಚ್ಚಳದ ಆತಂಕ ದೂರವಾಗುತ್ತಿವೆ. ವಿದೇಶಿ ಹೂಡಿಕೆದಾರರ ಬಂಡವಾಳ ಒಳಹರಿವು ಹೆಚ್ಚುತ್ತಿದೆ. ರೂಪಾಯಿ ವಿನಿಮಯ ದರ ಸ್ಥಿರಗೊಳ್ಳುತ್ತಿದೆ. ಹಣದುಬ್ಬರ ಹಿತಕರ ಮಟ್ಟದಲ್ಲಿ ಇದೆ. ಈ ಎಲ್ಲ ವಿದ್ಯಮಾನಗಳು ಆರ್ಥಿಕತೆಯ ಬೆಳವಣಿಗೆಯ ಬಗೆಗಿನ ನಿರೀಕ್ಷೆಗಳನ್ನು ಹೆಚ್ಚಿಸಿವೆ’ ಎಂದು ‘ಡಿಆ್ಯಂಡ್‌ಬಿ’ದ ಆರ್ಥಿಕ ತಜ್ಞ ಅರುಣ್ ಸಿಂಗ್‌ ವಿಶ್ಲೇಷಿಸಿದ್ದಾರೆ.

ADVERTISEMENT

2018–19ನೇ ಹಣಕಾಸು ವರ್ಷದಲ್ಲಿ ರಿಸರ್ವ್‌ ಬ್ಯಾಂಕ್ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಆದರೆ, 2019–20ನೇ ಹಣಕಾಸು ವರ್ಷದಲ್ಲಿ ಬಡ್ಡಿದರ ಏರಿಕೆಗೆ ಮುಂದಾಗಲಿದೆ ಎಂದು ಸಿಂಗಪುರದ ಹಣಕಾಸು ಸಂಸ್ಥೆ ಡಿಬಿಎಸ್‌ ವಿಶ್ಲೇಷಣೆ ಮಾಡಿದೆ.

ಈ ಆಶಾವಾದದ ಹೊರತಾಗಿಯೂ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿನ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣದಲ್ಲಿನ ಹೆಚ್ಚಳ, ಬ್ಯಾಂಕೇತರ ಹಣಕಾಸು ಸಂಸ್ಥೆಗಳ ನಿಯಂತ್ರಣ ಕ್ರಮಗಳನ್ನು ಬಿಗಿಗೊಳಿಸುವುದು ಒಟ್ಟಾರೆ ಹಣಕಾಸು ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.